ಆರೋಗ್ಯ

ಕೊರೋನಾ ಭಯದಿಂದ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿರುವ ಗರ್ಭಿಣಿಯರು, ಅಪಾಯದಲ್ಲಿ ತಾಯಿ-ಮಗು

Sumana Upadhyaya

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ನಡುವೆ ಗರ್ಭಿಣಿಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಿ ಸೂಕ್ತ ತಪಾಸಣೆ, ಔಷಧೋಪಚಾರಗಳನ್ನು ಪಡೆದುಕೊಳ್ಳುತ್ತಿಲ್ಲ ಎಂದು ವೈದ್ಯರು ಹೇಳುತ್ತಾರೆ. ಕೊರೋನಾ ಸೋಂಕಿನ ಭಯದಿಂದ ಮನೆಯಿಂದ ಆಸ್ಪತ್ರೆಗೆ ಹೋಗಲು ಭಯಪಡುವ ಗರ್ಭಿಣಿ ಮತ್ತು ಅವರ ಮನೆಯವರು ಇದರಿಂದ ತಾಯಿ-ಮಗು ಇಬ್ಬರ ಆರೋಗ್ಯವನ್ನು ಕೂಡ ಅಪಾಯಕ್ಕೆ ಒಡ್ಡುತ್ತಿದ್ದಾರೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಗರ್ಭಿಣಿಯರು ಸರಿಯಾಗಿ ತಪಾಸಣೆಗೆ ಬರುತ್ತಿಲ್ಲ, ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳು ಬರುತ್ತಿದ್ದು ಇದರಿಂದ ತಮಗೆ ತಗಲಿದರೆ ಎಂಬ ಭಯ, ಆತಂಕ ಅವರಲ್ಲಿ. ಆದರೆ ಇದು ಅವರ ಮೇಲೆಯೇ ಪರಿಣಾಮ ಬೀರುತ್ತದೆ. ಗರ್ಭಿಣಿಯರು ವೈದ್ಯರು ಹೇಳಿದಾಗ ಆಸ್ಪತ್ರೆಗೆ ಹೋಗಿ ಬಿ.ಪಿ, ಶುಗರ್, ಅನೀಮಿಯಾ, ಥೈರಾಯ್ಡ್ ಮೊದಲಾದವುಗಳನ್ನು ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಭ್ರೂಣದಲ್ಲಿರುವ ಮಗು ಹೇಗೆ ಬೆಳವಣಿಗೆಯಾಗುತ್ತಿದೆ ಎಂದು ಸಹ ನೋಡುತ್ತಿರಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಗರ್ಭಿಣಿಯರಲ್ಲಿ ಅಸ್ವಸ್ಥತೆಯಿದ್ದರೆ ಆರಂಭದಲ್ಲಿಯೇ ಕಂಡುಹಿಡಿಯಬೇಕು, ಇಲ್ಲದಿದ್ದರೆ ತಿಂಗಳುಗಳು ಕಳೆದಂತೆ ತಾಯಿ-ಮಗು ಇಬ್ಬರ ಆರೋಗ್ಯಕ್ಕೆ ಸಹ ತೊಂದರೆಯಿದೆ ಎನ್ನುತ್ತಾರೆ ಕೆ ಸಿ ಜನರಲ್ ಆಸ್ಪತ್ರೆಯ ಡಾ ಶ್ರಾವ್ಯಾ ಎಸ್. ಅಸ್ವಸ್ಥತೆಯಿಂದ ಬಳಲುತ್ತಿರುವ ತಾಯಿ ಆಸ್ಪತ್ರೆಗೆ ಹೋಗಿ ವೈದ್ಯರ ಸಲಹೆಯನ್ನು ಸರಿಯಾಗಿ ಪಡೆಯದಿದ್ದರೆ ಅವರಿಗೆ ಸರಿಯಾಗಿ ಕಬ್ಬಿಣ, ಕ್ಯಾಲ್ಸಿಯಂ ಮಾತ್ರೆಗಳು ಸಿಗುವುದಿಲ್ಲ. ಡಯಟ್ ಜೊತೆಗೆ ಕಬ್ಬಿಣದ ಕೊರತೆ ದೇಹದಲ್ಲಿ ಕಂಡುಬಂದರೆ ಹುಟ್ಟುವ ಮಗುವಿನ ಬೆಳವಣಿಗೆ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹೆರಿಗೆ ಸಂದರ್ಭದಲ್ಲಿ ತಾಯಿ ಹೆಚ್ಚು ರಕ್ತ ಹೀನತೆಯಿಂದ ಬಳಲಬಹುದು. ಮತ್ತಷ್ಟು ಅಸ್ವಸ್ಥತೆ ಉಂಟಾಗಬಹುದು ಎನ್ನುತ್ತಾರೆ ವಾಣಿ ವಿಲಾಸ ಆಸ್ಪತ್ರೆಯ ಡಾ ಸಂತೋಷ್ ಪ್ರಭ.

ಆಸ್ಪತ್ರೆಗಳಲ್ಲಿ ಅನೇಕ ರೋಗಿಗಳು ಬರುತ್ತಾರೆ, ತಮಗೆ ಕೊರೋನಾ ತಗಲುಬಹುದು ಎಂಬ ಭಯದಿಂದ ಗರ್ಭಿಣಿಯರು ಆಸ್ಪತ್ರೆಗೆ ಬಾರದೆ ಇರಬಾರದು. ಆದರೆ ಕೊರೋನಾ ಆರಂಭದ ದಿನಗಳಿಗೆ ಹೋಲಿಸಿದರೆ ಈಗ ಆಸ್ಪತ್ರೆಗಳಿಗೆ ಬಂದು ತಪಾಸಣೆ ಮಾಡಿಸಿಕೊಂಡು ಹೋಗುತ್ತಿರುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ವಾಣಿ ವಿಲಾಸ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ ಸವಿತಾ ಸಿ.

SCROLL FOR NEXT