ಆರೋಗ್ಯ

'ದೇಹದ ಉಷ್ಣತೆ, ಆಕ್ಸಿಜನ್ ಮಟ್ಟದ ಮೇಲೆ ನಿಗಾ ಇರಿಸಿ, ಸಾಕಷ್ಟು ನೀರು ಕುಡಿಯಿರಿ': ಕೋವಿಡ್ ಸೋಂಕಿತರಿಗೆ ಹೋಂ ಐಸೊಲೇಷನ್ ಕೈಪಿಡಿ 

Sumana Upadhyaya

ನವದೆಹಲಿ: ಕೊರೋನಾ ವೈರಸ್ ಸೋಂಕು ಬಹುತೇಕ ಮಂದಿಗೆ ಗಂಭೀರವಾಗುವುದಿಲ್ಲ, ಎಲ್ಲರಿಗೂ ಆಸ್ಪತ್ರೆಯಲ್ಲಿ ದಾಖಲಾಗುವ ಅವಶ್ಯಕತೆ ಬರುವುದಿಲ್ಲ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರ(ಪಿಎಸ್ ಎ) ಕಾರ್ಯಾಲಯ ಹೇಳಿದ್ದು ಹೋಂ ಐಸೊಲೇಷನ್ ನಲ್ಲಿದ್ದುಕೊಂಡು ಯಾವ ರೀತಿ ಆರೋಗ್ಯ ಪಾಲನೆ ಮಾಡಬೇಕೆಂಬುದನ್ನು ತಿಳಿಸಿದೆ. ಈ ಕುರಿತು ಕೈಪಿಡಿಯನ್ನು ದೇಶದ ಜನರಿಗೆ ಬಿಡುಗಡೆ ಮಾಡಿದೆ.

ಕೊರೋನಾ ಸೋಂಕಿತರು ಅಥವಾ ಪಾಸಿಟಿವ್ ಬಂದು ರೋಗಲಕ್ಷಣ ಹೊಂದಿಲ್ಲದವರು ಸ್ವ ವೈದ್ಯಕೀಯಗಳನ್ನು ಪಾಲನೆ ಮಾಡಬೇಡಿ, ವೈದ್ಯರು ಹೇಳುವ ರೀತಿಯೇ ಅನುಸರಿಸಿ, ಆಂಟಿಬಯೊಟಿಕ್ಸ್ ಗಳನ್ನು ಅಥವಾ ಅದಕ್ಕೆ ಪೂರಕವಾದದ್ದನ್ನು ತೆಗೆದುಕೊಳ್ಳಿ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರು ಹೇಳುತ್ತಾರೆ.

ಮನೆಯಲ್ಲಿಯೇ ಸರಳ ಸ್ವ ರಕ್ಷಣೆ ವಿಧಾನಗಳನ್ನು ಅನುಸರಿಸಿ ಕೋವಿಡ್ ಸೋಂಕಿನಿಂದ ಗುಣಮುಖರಾದವರು ಬಹುತೇಕ ಮಂದಿ ಇದ್ದಾರೆ. ಜ್ವರ, ಒಣ ಕೆಮ್ಮು, ಗಂಟಲು ನೋಯುವಿಕೆ, ಉಸಿರಾಟದ ತೊಂದರೆ, ದೇಹದ ನೋವು, ವಾಸನೆ ಅಥವಾ ರುಚಿ ಕಳೆದುಕೊಳ್ಳುವುದು, ತಲೆನೋವು, ಆಯಾಸ, ಶೀತ, ವಾಕರಿಕೆ, ವಾಂತಿ ಮತ್ತು ಅತಿಸಾರವನ್ನು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣ ಸ್ವ-ಆರೈಕೆ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಪಿಎಸ್ ಎ ಹೇಳುತ್ತದೆ.

ಈ ರೀತಿಯ ಲಕ್ಷಣಗಳು ಕಂಡುಬಂದರೆ ಭಯಭೀತರಾಗಬೇಡಿ, ಆತಂಕಕ್ಕೊಳಗಾಗಬೇಡಿ, ಇದರಿಂದ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನು ದೇಹ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಿದೆ.

ಏನು ಮಾಡಬೇಕು?: ಕೊರೋನಾ ಸೋಂಕಿನ ಲಕ್ಷಣ ಕಂಡುಬಂದರೆ ಅಂತವರು ಮನೆಯ ಬೇರೆ ಸದಸ್ಯರಿಂದ ತಕ್ಷಣ ದೂರವಾಗಿ. ಮನೆಯೊಳಗೆ ಬಾಯಿಗೆ ಎರಡು ಮಾಸ್ಕ್ ಧರಿಸಿಕೊಳ್ಳಿ, ಬೇರೆ ಸದಸ್ಯರಿಂದ ದೂರವುಳಿಯಿರಿ, ದಿನಕ್ಕೆ ಕನಿಷ್ಠ 2ರಿಂದ 3 ಲೀಟರ್ ನೀರು ಕುಡಿಯಿರಿ, ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. 

ದೇಹದ ಉಷ್ಣತೆ ಮತ್ತು ಆಕ್ಸಿಜನ್ ಮಟ್ಟವನ್ನು ಆಗಾಗ ಪರೀಕ್ಷಿಸುತ್ತಿರಿ. ದಿನಕ್ಕೆ ಮೂರ್ನಾಲ್ಕು ಬಾರಿ ದೇಹದ ಉಷ್ಣತೆ ಪರೀಕ್ಷಿಸುತ್ತಿರಿ, ಜ್ವರ ಇದ್ದವರಿಗೆ ಪಾರಸಿಟಮೋಲ್ ತೆಗೆದುಕೊಳ್ಳಲು ಮಾತ್ರ ಹೇಳುತ್ತಾರೆ. ಜ್ವರ 5 ದಿನಗಳವರೆಗೆ ಮುಂದುವರಿಯುತ್ತಿದ್ದರೆ ಆಸ್ಪತ್ರೆಗೆ ವೈದ್ಯರ ಬಳಿಗೆ ತಕ್ಷಣವೇ ಹೋಗಿ.

ನಿಮ್ಮ ಆಕ್ಸಿಜನ್ ಮಟ್ಟವನ್ನು ಪಲ್ಸ್ ಆಕ್ಸಿಮೀಟರ್ ಸಹಾಯದಿಂದ ದಿನಕ್ಕೆ ಮೂರ್ನಾಲ್ಕು ಬಾರಿ ಪರೀಕ್ಷೆ ಮಾಡಿಕೊಳ್ಳಿ. ನಿಮ್ಮ ಉಗುರುಗಳು ಸ್ವಚ್ಛವಾಗಿರಬೇಕು, ಉಗುರಿನಲ್ಲಿ ನೈಲ್ ಪಾಲಿಶ್ ಕೂಡ ಇರಬಾರದು. ಮನೆಯೊಳಗೆ ಹೊರಗಿನ ಸ್ವಚ್ಛ ಗಾಳಿ ಸರಾಗವಾಗಿ ಬೀಸುವಂತಿರಲಿ. 

ಸೋಂಕುಗಳನ್ನು ಹೊತ್ತೊಯ್ಯುವ ಡ್ರಾಪ್ಲೆಟ್ಸ್ ಮತ್ತು ಏರೋಸಾಲ್ ಗಳು, ಮುಚ್ಚಿದ ಸರಿಯಾಗಿ ಗಾಳಿಯಾಡದ ಸ್ಥಳಗಳಲ್ಲಿ ವೇಗವಾಗಿ ಸಂಗ್ರಹಗೊಳ್ಳುತ್ತದೆ, ಇದರಿಂದ ಮನೆಯಲ್ಲಿ ಇತರರಿಗೆ ಸೋಂಕು ಹಬ್ಬುವ ಅಪಾಯ ಹೆಚ್ಚು. 

ದೇಹದಲ್ಲಿ ಆಕ್ಸಿಜನ್ ಮಟ್ಟ ಹೆಚ್ಚಿಸಲು ಪ್ರೋನಿಂಗ್ ವ್ಯಾಯಾಮ ಮಾಡುತ್ತಿರಿ. ಆಕ್ಸಿಮೀಟರ್ ನಲ್ಲಿ ಎಸ್ ಪಿಒ2 ಮಟ್ಟ 94 ಶೇಕಡಾಕ್ಕಿಂತ ಕಡಿಮೆ ತೋರಿಸಿದರೆ ಆಗ ರೋಗಿಯು ಮನೆಯಲ್ಲಿಯೇ ಹೊಟ್ಟೆಗೆ ವ್ಯಾಯಾಮ ನೀಡುವ ಪ್ರೋನಿಂಗ್ ನ್ನು ಮಾಡುತ್ತಿರಬೇಕು.ಇದರಿಂದ ನಿಮಗೆ ಉಸಿರಾಟ ಸಾಮರ್ಥ್ಯ ಹೆಚ್ಚಾಗಿ ಆಕ್ಸಿಜನ್ ಸರಾಗವಾಗಿ ದೇಹಕ್ಕೆ ಹೋಗುತ್ತಿರುತ್ತದೆ.

ಪ್ರೋನಿಂಗ್ ಮಾಡುವುದು ಹೇಗೆ?: ಮೊದಲಿಗೆ ತೆಳುವಾದ ಬೆಡ್ ಮೇಲೆ ಅರ್ಧ ಗಂಟೆಯಿಂದ ಎರಡು ಗಂಟೆಯವರೆಗೆ ಮಲಗಬೇಕು. ಮುಂದಿನ ಹಂತದಲ್ಲಿ ರೋಗಿಯು ಬಲ ಭಾಗದಲ್ಲಿ ಅರ್ಧ ಗಂಟೆಯಿಂದ 2 ಗಂಟೆಯವರೆಗೆ ಮಲಗಬೇಕು. ಮೂರನೇ ಹಂತದಲ್ಲಿ 30 ನಿಮಿಷದಿಂದ 2 ಗಂಟೆಯವರೆಗೆ 30ರಿಂದ 60 ಡಿಗ್ರಿ ಭಂಗಿಯಲ್ಲಿ ಮಲಗಬೇಕು.

ನಾಲ್ಕನೇ ಹಂತದಲ್ಲಿ ಎಡ ಮಗ್ಗುಲಿನಲ್ಲಿ 30 ನಿಮಿಷದಿಂದ 2 ಗಂಟೆಯವರೆಗೆ ಮಲಗಬೇಕು, ಐದನೇ ಹಂತದಲ್ಲಿ ಅರೆ ಪ್ರೋನಿಂಗ್ ಭಂಗಿಯಲ್ಲಿ 30 ನಿಮಿಷದಿಂದ 2 ಗಂಟೆಯವರೆಗೆ ಮಲಗಬೇಕು. ಕೊನೆಯ ಹಂತದಲ್ಲಿ ಮತ್ತೆ ಪ್ರೋನಿಂಗ್ ಹಂತದಲ್ಲಿ 30 ನಿಮಿಷದಿಂದ 2 ಗಂಟೆಯವರೆಗೆ ಮಲಗಬೇಕು, ಹೀಗೆ ಪುನರಾವರ್ತಿಸುತ್ತಿರಬೇಕು.

ಗರ್ಭಧಾರಣೆ, ಆಳವಾದ ರಕ್ತನಾಳದ ಥ್ರಂಬೋಸಿಸ್, ಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳು, ಬೆನ್ನು ಅಥವಾ ಮೂಳೆ ಮುರಿದಿದ್ದರೆ ಅಂತವರು ಪ್ರೋನಿಂಗ್ ನ್ನು ಮಾಡದಿರುವುದು ಉತ್ತಮ. ಪ್ರೋನಿಂಗ್ ಭಂಗಿಯಲ್ಲಿರುವಾಗ ಆಕ್ಸಿಜನ್ ಮಟ್ಟವನ್ನು ಪರೀಕ್ಷೆ ಮಾಡಿಕೊಳ್ಳಿ. ಆಕ್ಸಿಜನ್ ಮಟ್ಟ 92 ಶೇಕಡಾಕ್ಕಿಂತ ಕಡಿಮೆ ಹೋದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. 
ಬಿ.1.617 ರೂಪಾಂತರಿ ಕೊರೋನಾಗೆ ಕೊವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳು ಪರಿಣಾಮಕಾರಿ, ಭಾರತದ ಈ ಎರಡೂ ಲಸಿಕೆಗಳು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುತ್ತವೆ.

ಸಂಪೂರ್ಣವಾಗಿ ಲಸಿಕೆ ಹಾಕಿಸಿದ ಕೆಲವು ದೇಶಗಳಲ್ಲಿ ಲಸಿಕೆ ಅಭಿಯಾನ ನಂತರ ಸೋಂಕಿನ ಮಟ್ಟ ಶೇಕಡಾ 95.8ರಷ್ಟು ಕಡಿಮೆಯಾಗಿದೆ ಎಂದು ಕೈಪಿಡಿ ಹೇಳಿದೆ.

SCROLL FOR NEXT