ಸಂಗ್ರಹ ಚಿತ್ರ 
ಆರೋಗ್ಯ

ಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತಿದೆಯೇ?; ಬಿರು ಬಿಸಿಲಿನ ವೇಳೆ ಈ ಆಹಾರಗಳ ತಪ್ಪಿಸುವುದೇ ಉತ್ತಮ..!

ಅತಿಯಾದ ಬಿಸಿಲಿನಿಂದ ಹೊಟ್ಟೆಯಲ್ಲಿರುವ ಜೀರ್ಣಕಾರಿ ಕಿಣ್ವಗಳ ಕಾರ್ಯಕ್ಷಮತೆ ಕಡಿಮೆಯಾಗಬಹುದು. ವಿಶೇಷವಾಗಿ ಪ್ರೋಟೀನ್ ಹಾಗೂ ಹೆಚ್ಚು ಫ್ಯಾಟ್ (ಕೊಬ್ಬು) ಆಹಾರವನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ.

ಬೇಸಿಗೆ ಆರಂಭವಾದರೆ ಸಾಕು, 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶ ಸಾಮಾನ್ಯವಾಗಿಬಿಟ್ಟಿದೆ. ಬಿಸಿಲು ಮತ್ತು ಸೆಖೆಯಿಂದ ಬಳಲುವುದಷ್ಟೇ ಅಲ್ಲ, ಊಟದ ಬಳಿಕ ಹೊಟ್ಟೆ ಉಬ್ಬರ, ಎದೆ ಉರಿ, ಗ್ಯಾಸ್, ಮಲಬದ್ಧತೆ, ಹೊಟ್ಟೆ ಭಾರವಾದ ಅನುಭವದಂತಹ ಜೀರ್ಣಕ್ರಿಯೆ ಸಮಸ್ಯೆಗಳೂ ಹಲವರನ್ನು ಕಾಡುತ್ತವೆ.

ಇದಕ್ಕೆ ಕೇವಲ ಆಹಾರವೇ ಕಾರಣ ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ವೈದ್ಯರು ತೀವ್ರ ಬಿಸಿಲು ಜೀರ್ಣಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ.

ಹಾಗಾದರೆ ಬೇಸಿಗೆಯಲ್ಲಿ ಜೀರ್ಣಕ್ರಿಯೆ ಏಕೆ ನಿಧಾನವಾಗುತ್ತದೆ? ಯಾವ ಆಹಾರಗಳನ್ನು ತಪ್ಪಿಸಬೇಕು? ಆರೋಗ್ಯಕರ ಜೀರ್ಣಕ್ರಿಯೆಗಾಗಿ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೇಸಿಗೆಯಲ್ಲಿ ಜೀರ್ಣಕ್ರಿಯೆ ನಿಧಾನವಾಗುವುದೇಕೆ..?

ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಜೀರ್ಣಕಾರಿ ಕಿಣ್ವಗಳು (Enzymes), ರಕ್ತಸಂಚಾರ ಮತ್ತು ಕರುಳಿನ ಚಲನೆ ಸಮತೋಲನದಲ್ಲಿರಬೇಕು. ಆದರೆ, ಅತಿಯಾದ ಉಷ್ಣಾಂಶ ಈ ಮೂರು ಅಂಶಗಳ ಮೇಲೂ ಪರಿಣಾಮ ಬೀರುತ್ತದೆ.

ಸಂಗ್ರಹ ಚಿತ್ರ

ರಕ್ತಸಂಚಾರ ಕಡಿಮೆಯಾಗುವುದು

ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ರಕ್ತವು ಹೆಚ್ಚಾಗಿ ಚರ್ಮದ ಕಡೆಗೆ ಹರಿಯುತ್ತದೆ. ಇದರಿಂದ ಹೊಟ್ಟೆ ಹಾಗೂ ಕರುಳಿಗೆ ಹೋಗುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಪರಿಣಾಮ ಆಹಾರ ಜೀರ್ಣವಾಗುವ ಪ್ರಕ್ರಿಯೆ ನಿಧಾನವಾಗುತ್ತದೆ.

ಜೀರ್ಣಕಾರಿ ಕಿಣ್ವಗಳ ಕಾರ್ಯಕ್ಷಮತೆ ಕುಸಿತ

ಅತಿಯಾದ ಬಿಸಿಲಿನಿಂದ ಹೊಟ್ಟೆಯಲ್ಲಿರುವ ಜೀರ್ಣಕಾರಿ ಕಿಣ್ವಗಳ ಕಾರ್ಯಕ್ಷಮತೆ ಕಡಿಮೆಯಾಗಬಹುದು. ವಿಶೇಷವಾಗಿ ಪ್ರೋಟೀನ್ ಹಾಗೂ ಕೊಬ್ಬಿನ ಆಹಾರವನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ.

ನಿರ್ಜಲೀಕರಣ ಸಮಸ್ಯೆ

ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯದಿದ್ದರೆ ದೇಹ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಇದರಿಂದ ಜೀರ್ಣರಸ ದಪ್ಪವಾಗುತ್ತದೆ ಮತ್ತು ಆಹಾರವು ಕರುಳಿನಲ್ಲಿ ನಿಧಾನವಾಗಿ ಚಲಿಸುತ್ತದೆ. ಪರಿಣಾಮವಾಗಿ ಹೊಟ್ಟೆ ಉಬ್ಬರ, ಮಲಬದ್ಧತೆ ಹಾಗೂ ಗ್ಯಾಸ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಊಟದ ಸಮಯದಲ್ಲಿ ಅಸಮರ್ಪಕತೆ

ಬೇಸಿಗೆಯಲ್ಲಿ ಹಸಿವು ಕಡಿಮೆಯಾಗುವುದು ಸಾಮಾನ್ಯ. ಬೆಳಿಗ್ಗೆ ಅಥವಾ ಮಧ್ಯಾಹ್ನ ಊಟ ಬಿಡುವುದು, ನಂತರ ರಾತ್ರಿ ಹೆಚ್ಚು ತಿನ್ನುವುದು ಜೀರ್ಣಾಂಗದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ಇದರಿಂದ ಆಸಿಡಿಟಿ, ಎದೆ ಉರಿ ಹಾಗೂ ಹೊಟ್ಟೆ ತುಂಬಿದ ಅನುಭವ ಹೆಚ್ಚಾಗುತ್ತದೆ.

ಸಂಗ್ರಹ ಚಿತ್ರ

ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಜೀರ್ಣಕ್ರಿಯೆ ಸಮಸ್ಯೆಗಳು

  • ಎದೆ ಉರಿ (Heartburn)

  • ಗ್ಯಾಸ್ಟ್ರೈಟಿಸ್ (ಹೊಟ್ಟೆಯ ಒಳಪದರ ಉರಿಯೂತ)

  • ಹೊಟ್ಟೆ ಉಬ್ಬರ

  • ಗ್ಯಾಸ್ ಸಮಸ್ಯೆ

  • ಮಲಬದ್ಧತೆ

  • ಅತಿಸಾರ

  • ಆಹಾರ ವಿಷಬಾಧೆ (ಫುಡ್ ಪಾಯಿಸನ್)

  • ಕರುಳಿನ ಸೋಂಕು

  • ಐಬಿಎಸ್ (Irritable Bowel Syndrome) ಸಮಸ್ಯೆ ಉಲ್ಬಣ

ಈ ಲಕ್ಷಣಗಳು ಒಂದು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ಅಥವಾ ಮರುಮರು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಬೇಸಿಗೆಯಲ್ಲಿ ತಪ್ಪಿಸಲೇಬೇಕಾದ ಆಹಾರಗಳು...

ಖಾರಯುಕ್ತ ರಸ್ತೆಬದಿಯ ಆಹಾರ

ತೀವ್ರ ಖಾರವು ಹೊಟ್ಟೆಯ ಒಳಪದರವನ್ನು ಕೆರಳಿಸಿ ಗ್ಯಾಸ್ಟ್ರೈಟಿಸ್ ಹಾಗೂ ಆಸಿಡಿಟಿ ಸಮಸ್ಯೆ ಹೆಚ್ಚಿಸಬಹುದು.

ರಸ್ತೆಬದಿಯ ಜ್ಯೂಸ್

ಶುದ್ಧೀಕರಿಸದ ನೀರಿನಿಂದ ತಯಾರಿಸಿದ ಐಸ್ ಬಳಸಿರುವ ಜ್ಯೂಸ್‌ಗಳಿಂದ ಹೊಟ್ಟೆಯ ಸೋಂಕು ಉಂಟಾಗುವ ಅಪಾಯ ಹೆಚ್ಚಿರುತ್ತದೆ.

ಸಂಗ್ರಹ ಚಿತ್ರ

ತಂಪು ಪಾನೀಯಗಳು

ಕಾರ್ಬೊನೇಟೆಡ್ ಪಾನೀಯಗಳು ತಾತ್ಕಾಲಿಕ ತಂಪು ನೀಡಿದರೂ, ನಂತರ ಹೊಟ್ಟೆ ಉಬ್ಬರ ಮತ್ತು ಆಸಿಡಿಟಿಯನ್ನು ಹೆಚ್ಚಿಸಬಹುದು.

ಖಾಲಿ ಹೊಟ್ಟೆಯಲ್ಲಿ ನೋವು ನಿವಾರಕ ಮಾತ್ರೆಗಳು

ತಲೆನೋವಿನ ಕಾರಣಕ್ಕೆ ಖಾಲಿ ಹೊಟ್ಟೆಯಲ್ಲಿ ಐಬುಪ್ರೊಫೆನ್ ಅಥವಾ ಆಸ್ಪಿರಿನ್ ಸೇವಿಸುವುದರಿಂದ ಹೊಟ್ಟೆಯ ಒಳಪದರಕ್ಕೆ ಹಾನಿಯಾಗುವ ಸಾಧ್ಯತೆ ಇದೆ.

ರಾತ್ರಿ ವೇಳೆ ಅತಿಯಾದ ಎಣ್ಣೆಯುಕ್ತ ಆಹಾರ

ರಾತ್ರಿ ವೇಳೆ ಜೀರ್ಣಕ್ರಿಯೆ ಸಹಜವಾಗಿಯೇ ನಿಧಾನವಾಗಿರುತ್ತದೆ. ಈ ಸಮಯದಲ್ಲಿ ಹೆಚ್ಚು ಎಣ್ಣೆ ಮತ್ತು ಕೊಬ್ಬಿನ ಆಹಾರ ಸೇವಿಸಿದರೆ ಮರುದಿನ ಆಸಿಡಿಟಿ ಹಾಗೂ ಎದೆ ಉರಿ ಹೆಚ್ಚಾಗಬಹುದು.

ಕತ್ತರಿಸಿ ಇಟ್ಟ ಹಣ್ಣುಗಳು

ಬೇಸಿಗೆಯ ಬಿಸಿಯಲ್ಲಿ ಹೊರಗೆ ಕತ್ತರಿಸಿ ಇಟ್ಟಿರುವ ಹಣ್ಣುಗಳಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಇಂತಹ ಹಣ್ಣುಗಳನ್ನು ಸೇವಿಸದಿರುವುದು ಉತ್ತಮ.

ಸಂಗ್ರಹ ಚಿತ್ರ

ಬೇಸಿಗೆಯಲ್ಲಿ ಜೀರ್ಣಕ್ರಿಯೆ ಉತ್ತಮವಾಗಿರಲು ಏನು ಮಾಡಬೇಕು?

  • ದಿನಕ್ಕೆ 2.5 ರಿಂದ 3 ಲೀಟರ್ ನೀರು ಕುಡಿಯಿರಿ.

  • ಮಜ್ಜಿಗೆ, ಎಳನೀರು, ನಿಂಬೆಹಣ್ಣು ನೀರಿನಂತಹ ನೈಸರ್ಗಿಕ ಪಾನೀಯಗಳನ್ನು ಸೇವಿಸಿ.

  • ಸ್ವಲ್ಪ ಪ್ರಮಾಣದಲ್ಲಿ, ಆಗಾಗ್ಗೆ ಆಹಾರ ಸೇವಿಸಿ.

  • ಹಣ್ಣು, ತರಕಾರಿ ಮತ್ತು ನಾರಿನಾಂಶ ಹೆಚ್ಚಿರುವ ಆಹಾರ ಸೇವಿಸಿ.

  • ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗಿನ ಆಹಾರ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

  • ಆಹಾರವನ್ನು ತಾಜಾ ಮತ್ತು ಸ್ವಚ್ಛವಾಗಿ ತಯಾರಿಸಿ ಸೇವಿಸಿ.

  • ಪ್ರತಿದಿನ ಸ್ವಲ್ಪ ಸಮಯ ನಡೆಯುವುದು ಅಥವಾ ಲಘು ವ್ಯಾಯಾಮ ಮಾಡುವುದು ಜೀರ್ಣಕ್ರಿಯೆಗೆ ಸಹಕಾರಿ.

ಗಮನದಲ್ಲಿರಲಿ..

ಬೇಸಿಗೆಯಲ್ಲಿ ಹೊಟ್ಟೆ ಸಮಸ್ಯೆಗಳು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡಬಾರದು. ಪದೇಪದೇ ಆಸಿಡಿಟಿ, ಹೊಟ್ಟೆ ನೋವು, ವಾಂತಿ, ರಕ್ತಸ್ರಾವ, ತೀವ್ರ ಮಲಬದ್ಧತೆ ಅಥವಾ ಅತಿಸಾರ ಕಂಡುಬಂದರೆ ಸ್ವಯಂ ಔಷಧಿ ಸೇವಿಸುವ ಬದಲು ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ. ಸರಿಯಾದ ಆಹಾರ ಪದ್ಧತಿ, ಸಾಕಷ್ಟು ನೀರಿನ ಸೇವನೆ ಮತ್ತು ಸ್ವಚ್ಛ ಆಹಾರದಿಂದ ಬೇಸಿಗೆಯಲ್ಲೂ ಜೀರ್ಣಾಂಗವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ದಾಳಿಗೆ Iran ಪ್ರತೀಕಾರ; Hormuzನಲ್ಲಿ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿಗಳ ಸುರಿಮಳೆ; ಭಾರತೀಯ ನಾವಿಕ ಸಾವು, 8 ಮಂದಿಗೆ ಗಾಯ

ಮೊದಲ ಬಾರಿಗೆ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿಗೆ ಮಹತ್ವದ ಘೋಷಣೆಗಳ ನಿರೀಕ್ಷೆ..!

BJP ಹಿರಿಯ ನಾಯಕ ರಾಮಚಂದ್ರೇಗೌಡ ವಿಧಿವಶ: ತಳಮಟ್ಟದಿಂದ ಪಕ್ಷ ಕಟ್ಟಲು ಯಡಿಯೂರಪ್ಪಗೆ ಸಾಥ್ ನೀಡಿದ್ದ ಧುರೀಣ!

ರಾಹುಲ್ ವಾಪಸ್ಸಾಗುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಕಸರತ್ತು; CM ಸೇರಿ ರಾಜ್ಯ ನಾಯಕರಿಗೆ ದೆಹಲಿ ಬುಲಾವ್ ಸಾಧ್ಯತೆ, 2 ದಿನಗಳಲ್ಲಿ ಸ್ಪಷ್ಟ ಚಿತ್ರಣ

ರಾಜ್ಯ ಪ್ರವಾಸೋದ್ಯಮಕ್ಕೆ ಬಿಗ್ ಬೂಸ್ಟ್; 13 ಪ್ರವಾಸಿ ತಾಣಗಳಲ್ಲಿ Ropeway ಯೋಜನೆ ಜಾರಿಗೆ ಸರ್ಕಾರ ಮುಂದು..!