ಮಳೆಗಾಲ ಆರಂಭವಾದರೆ ಸಾಕು, ಶೀತ, ನೆಗಡಿ, ಮೂಗು ಕಟ್ಟುವುದು, ಗಂಟಲು ನೋವು, ಕೆಮ್ಮು, ಉಸಿರುಗಟ್ಟುವುದು, ವೈರಲ್ ಜ್ವರದಂತಹ ಸಮಸ್ಯೆಗಳು ಸಾಮಾನ್ಯವಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಅನೇಕರು ಮಾರುಕಟ್ಟೆಯಲ್ಲಿ ದೊರೆಯುವ ವೇಪರ್ ರಬ್ ಬಳಸಿ ನೆಮ್ಮದಿ ಪಡೆಯುತ್ತಾರೆ. ಆದರೆ, ಅದು ಇಲ್ಲದಿದ್ದರೆ ಏನು ಮಾಡಬೇಕು?
ಅಜ್ಜಿಯ ಕಾಲದಿಂದಲೂ ನಮ್ಮ ಮನೆಗಳಲ್ಲಿ ಬಳಸುತ್ತಿರುವ ಕೆಲವು ನೈಸರ್ಗಿಕ ವಿಧಾನಗಳು ಮೂಗು ಕಟ್ಟುವುದು, ಉಸಿರುಗಟ್ಟುವುದು ಹಾಗೂ ಶೀತದ ಅಸ್ವಸ್ಥತೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ನೆರವಾಗುತ್ತವೆ. ಇವು ಔಷಧಿಗೆ ಪರ್ಯಾಯವಲ್ಲ, ಆದರೆ, ಆರಂಭಿಕ ಹಂತದ ಅಸ್ವಸ್ಥತೆಯಲ್ಲಿ ಆರಾಮ ನೀಡಬಹುದು.
ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ 5 ನೈಸರ್ಗಿಕ ವೇಪರ್ ರಬ್ ಪರ್ಯಾಯಗಳು ಇಲ್ಲಿವೆ.
ತೆಂಗಿನ ಎಣ್ಣೆ ಮತ್ತು ಯೂಕಲಿಪ್ಟಸ್ ಅಥವಾ ಪುದೀನಾ ಎಣ್ಣೆ
ತೆಂಗಿನ ಎಣ್ಣೆ ಚರ್ಮಕ್ಕೆ ತೇವಾಂಶ ನೀಡುತ್ತದೆ. ಯೂಕಲಿಪ್ಟಸ್ ಅಥವಾ ಪುದೀನಾ ಎಣ್ಣೆಯ ಸುಗಂಧ ಉಸಿರಾಟಕ್ಕೆ ಸ್ವಲ್ಪ ಹಗುರವಾದ ಅನುಭವವನ್ನು ನೀಡಬಹುದು.
ಆದರೆ, ಎರಡನ್ನೂ ಒಟ್ಟಿಗೆ ಬಳಸಬೇಡಿ. ಯಾವುದೇ ಎಸೆನ್ಶಿಯಲ್ ಆಯಿಲ್ ಅನ್ನು ನೇರವಾಗಿ ಚರ್ಮಕ್ಕೆ ಹಚ್ಚಬಾರದು. ಮೊದಲು ತೆಂಗಿನ ಎಣ್ಣೆಯಲ್ಲಿ ಚೆನ್ನಾಗಿ ಬೆರೆಸಬೇಕು. 2 ಚಮಚ ತೆಂಗಿನ ಎಣ್ಣೆ, 1–2 ಹನಿ ಯೂಕಲಿಪ್ಟಸ್ ಅಥವಾ ಪುದೀನಾ ಎಸೆನ್ಶಿಯಲ್ ಆಯಿಲ್ ನ್ನು ಚೆನ್ನಾಗಿ ಬರೆಸಿ, ಮಿಶ್ರಣವನ್ನು ಎದೆ, ಗಂಟಲು ಹಾಗೂ ಬೆನ್ನಿನ ಮೇಲೆ ಮಲಗುವ ಮೊದಲು ಸವರಿಕೊಳ್ಳಿ.
ಇದರಿಂದ ಮೂಗು ಕಟ್ಟಿದ ಅನುಭವ ಕಡಿಮೆಯಾಗಲು ಸಹಾಯವಾಗುತ್ತದೆ. ಅಲ್ಲದೆ, ಶ್ವಾಸಕೋಶದ ಭಾಗದಲ್ಲಿ ಆರಾಮದ ಅನುಭವ ನೀಡಿ, ರಾತ್ರಿ ನಿದ್ರೆ ಸುಲಭವಾಗಲು ಸಹಾಯಕವಾಗುತ್ತದೆ.
ಸಾಸಿವೆ ಎಣ್ಣೆ ಮತ್ತು ಬೆಳ್ಳುಳ್ಳಿ
ಇದು ಭಾರತೀಯ ಮನೆಗಳಲ್ಲಿ ಹಿಂದಿನಿಂದಲೂ ಬಳಸುತ್ತಿರುವ ಸಾಂಪ್ರದಾಯಿಕ ಮನೆಮದ್ದು. 2–3 ಚಮಚ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ 2-3 ಬೆಳ್ಳುಳ್ಳಿ ಹಾಕಿ. ಬೆಳ್ಳುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ. ಇದನ್ನು ಎದೆ, ಬೆನ್ನು ಹಾಗೂ ಪಾದಗಳಿಗೆ ಮೃದುವಾಗಿ ಮಸಾಜ್ ಮಾಡಿ.
ಇದರಿಂದ ಶೀತ ಕಡಿಮೆಯಾಗಿ ದೇಹ ಬಿಸಿಯಾಗುತ್ತದೆ. ಶೀತದಿಂದ ಉಂಟಾಗುವ ಅಸ್ವಸ್ಥತೆಯನ್ನೂ ಇದು ಕಡಿಮೆ ಮಾಡುತ್ತದೆ. ಅಲ್ಲದೆ, ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ.
ಅಜ್ವೈನ್ (ಓಂ ಕಾಳು)
ಓಂ ಕಾಳು ಶೀತ-ನೆಗಡಿಗೆ ಅತ್ಯಂತ ಜನಪ್ರಿಯ ಮನೆಮದ್ದಾಗಿದೆ. 1–2 ಚಮಚ ಓಂ ಕಾಳನ್ನು ಒಣ ಬಾಣಲೆಯಲ್ಲಿ ಹುರಿಯಿರಿ. ನಂತರ ಅದನ್ನು ಹತ್ತಿಯ ಅಥವಾ ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ ಪೊಟ್ಟಣ ಮಾಡಿ. ಇದನ್ನು ಎದೆಯ ಮೇಲೆ ಇಟ್ಟುಕೊಳ್ಳಿ. ಮೂಗಿನ ಹತ್ತಿರ ಹಿಡಿದು ಅದರ ಉಷ್ಣವಾದ ಪರಿಮಳವನ್ನು ನಿಧಾನವಾಗಿ ಉಸಿರಾಡಿ.
ಇದರಿಂದ ಮೂಗು ಕಟ್ಟುವುದು ಕಡಿಮೆಯಾಗಿ, ಉಸಿರಾಟ ಸ್ವಲ್ಪ ಸುಲಭವಾಗುತ್ತದೆ.
ಸ್ಟೀಮ್ ಇನ್ಹೇಲೇಷನ್ (ಆವಿ ತೆಗೆದುಕೊಳ್ಳುವುದು)
ಮೂಗು ಕಟ್ಟಿದಾಗ ವೈದ್ಯರು ಹೆಚ್ಚಾಗಿ ಶಿಫಾರಸು ಮಾಡುವ ಸರಳ ವಿಧಾನ ಸ್ಟೀಮ್ ಇನ್ಹೇಲೇಷನ್. ಪಾತ್ರೆಯಲ್ಲಿ ನೀರು ಕಾಯಿಲಿ, ಅದಕ್ಕೆ ಯೂಕಲಿಪ್ಟಸ್ ಕ್ಯಾಪ್ಸೂಲ್ ಅಥವಾ ಪುದೀನಾ ಕ್ಯಾಪ್ಸೂಲ್ ಹಾಕಿ. ತಲೆಯ ಮೇಲೆ ಟವೆಲ್ ಹೊದ್ದು 5–10 ನಿಮಿಷ ಆವಿಯನ್ನು ನಿಧಾನವಾಗಿ ಉಸಿರಾಡಿ.
ಇದರಿಂದ ಮೂಗು ಕಟ್ಟುವುದು ಕಡಿಮೆಯಾಗಿ, ಗಂಟಲಿನ ಅಸ್ವಸ್ಥತೆ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ ಹಾಗೂ ಉಸಿರಾಟಕ್ಕೆ ಆರಾಮ ಸಿಗಬಹುದು.
ಎಚ್ಚರಿಕೆ: ಮಕ್ಕಳು ಬಿಸಿ ನೀರಿನ ಆವಿ ತೆಗೆದುಕೊಳ್ಳುವಾಗ ದೊಡ್ಡವರ ಮೇಲ್ವಿಚಾರಣೆ ಅಗತ್ಯ.
ಬೀಸ್‌ವ್ಯಾಕ್ಸ್ (ಜೇನುಮೇಣ) ಬಾಮ್
ಇದು ಮನೆಯಲ್ಲೇ ತಯಾರಿಸಬಹುದಾದ ನೈಸರ್ಗಿಕ ವೇಪರ್ ರಬ್.
ಬೇಕಾಗುವ ಪದಾರ್ಥಗಳು...
2 ಚಮಚ ತೆಂಗಿನ ಎಣ್ಣೆ
1 ಚಮಚ ಜೇನುಮೇಣ
2–3 ಹನಿ ಯೂಕಲಿಪ್ಟಸ್ ಎಣ್ಣೆ
1–2 ಹನಿ ಕರ್ಪೂರದ ಎಣ್ಣೆ (ಐಚ್ಛಿಕ)
ತಯಾರಿಸುವ ವಿಧಾನ...
ತೆಂಗಿನ ಎಣ್ಣೆ ಮತ್ತು ಜೇನುಮೇಣವನ್ನು ಕರಗಿಸಿ. ನಂತರ ಎಸೆನ್ಶಿಯಲ್ ಆಯಿಲ್ ಸೇರಿಸಿ ಚೆನ್ನಾಗಿ ಬೆರೆಸಿ ತಣ್ಣಗಾಗಲು ಬಿಡಿ. ಇದು ಗಟ್ಟಿಯಾದ ಬಳಿಕ ವೇಪರ್ ರಬ್‌ನಂತೆಯೇ ಕಾಣುತ್ತದೆ. ಇದನ್ನು ಎದೆ ಹಾಗೂ ಬೆನ್ನಿನ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಸವರಿಕೊಳ್ಳಿ.
ಈ ಮನೆಮದ್ದುಗಳನ್ನು ಬಳಸುವಾಗ ಗಮನಿಸಬೇಕಾದ ಸಂಗತಿಗಳು...
ಎಸೆನ್ಶಿಯಲ್ ಆಯಿಲ್ ಅನ್ನು ನೇರವಾಗಿ ಚರ್ಮಕ್ಕೆ ಹಚ್ಚಬೇಡಿ.
ಮಕ್ಕಳಿಗೆ ಬಳಸುವ ಮೊದಲು ಮಕ್ಕಳ ತಜ್ಞರ ಸಲಹೆ ಪಡೆಯಿರಿ.
ಚರ್ಮದಲ್ಲಿ ಅಲರ್ಜಿ ಕಂಡುಬಂದರೆ ತಕ್ಷಣ ಬಳಕೆ ನಿಲ್ಲಿಸಿ.
ಹೆಚ್ಚಿನ ಜ್ವರ, ಉಸಿರಾಟದ ತೊಂದರೆ ಅಥವಾ ಎದೆನೋವು ಇದ್ದರೆ ಮನೆಮದ್ದಿನ ಮೇಲೆ ಮಾತ್ರ ಅವಲಂಬಿಸದೆ ವೈದ್ಯರನ್ನು ಸಂಪರ್ಕಿಸಿ.
ಅಸ್ತಮಾ ಅಥವಾ ಅಲರ್ಜಿ ಇರುವವರು ಯೂಕಲಿಪ್ಟಸ್ ಮತ್ತು ಪುದೀನಾ ಎಣ್ಣೆ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.
ಮನೆಯಲ್ಲೇ ತಯಾರಿಸುವ ಈ ನೈಸರ್ಗಿಕ ಪರ್ಯಾಯಗಳು ಶೀತ, ನೆಗಡಿ, ಮೂಗು ಕಟ್ಟುವುದು ಹಾಗೂ ಎದೆ ಬಿಗಿತದಿಂದ ಉಂಟಾಗುವ ಅಸ್ವಸ್ಥತೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ, ಇವು ಯಾವುದೇ ಕಾಯಿಲೆಗೆ ಚಿಕಿತ್ಸೆಯಲ್ಲ. ಲಕ್ಷಣಗಳು ತೀವ್ರವಾಗಿದ್ದರೆ ಅಥವಾ ಹಲವು ದಿನಗಳವರೆಗೆ ಮುಂದುವರಿದರೆ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.