ಸಂಗ್ರಹ ಚಿತ್ರ 
ಆರೋಗ್ಯ

Energy drinks ಜೊತೆ ಮದ್ಯ ಸೇವಿಸುತ್ತೀರಾ..? ಹಾಗಿದ್ರೆ ಹೃದಯಾಘಾತಕ್ಕೆ ನೀವೇ ಆಹ್ವಾನ ನೀಡುತ್ತಿದ್ದೀರಿ..!

ಪಾರ್ಟಿಗಳು, ನೈಟ್‌ಲೈಫ್ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮದ್ಯದೊಂದಿಗೆ ಎನರ್ಜಿ ಡ್ರಿಂಕ್‌ಗಳನ್ನು ಬೆರೆಸಿ ಸೇವಿಸುವುದು ಒಂದು ಫ್ಯಾಷನ್‌ ಆಗಿ ಬೆಳೆಯುತ್ತಿದೆ.

ಇಂದಿನ ಯುವಜನರಲ್ಲಿ ಮದ್ಯಪಾನದ ಸಂಸ್ಕೃತಿ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದೆ. ಪಾರ್ಟಿಗಳು, ನೈಟ್‌ಲೈಫ್ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮದ್ಯದೊಂದಿಗೆ ಎನರ್ಜಿ ಡ್ರಿಂಕ್‌ಗಳನ್ನು ಬೆರೆಸಿ ಸೇವಿಸುವುದು ಒಂದು ಫ್ಯಾಷನ್‌ ಆಗಿ ಬೆಳೆಯುತ್ತಿದೆ. ಎನರ್ಜಿ ಡ್ರಿಂಕ್‌ಗಳು ದೇಹಕ್ಕೆ ಚೈತನ್ಯ ಮತ್ತು ಎಚ್ಚರಿಕೆಯನ್ನು ನೀಡುತ್ತವೆ ಎಂಬ ನಂಬಿಕೆಯಿಂದ ಅನೇಕರು ಮದ್ಯದ ಮತ್ತನ್ನು ಕಡಿಮೆ ಮಾಡಲು ಅಥವಾ ಹೆಚ್ಚು ಸಮಯ ಜಾಗೃತರಾಗಿರಲು ಈ ಮಿಶ್ರಣವನ್ನು ಆಯ್ಕೆ ಮಾಡುತ್ತಾರೆ.

ಆದರೆ, ಈ ಅಭ್ಯಾಸವು ಕೇವಲ ತಾತ್ಕಾಲಿಕ ಉಲ್ಲಾಸವನ್ನು ನೀಡುವುದಲ್ಲದೆ, ದೇಹದ ಮೇಲೆ ಗಂಭೀರ ಮತ್ತು ದೀರ್ಘಕಾಲೀನ ದುಷ್ಪರಿಣಾಮಗಳನ್ನು ಉಂಟುಮಾಡುವ ಅಪಾಯವನ್ನು ಹೊಂದಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮದ್ಯವು ನರಮಂಡಲದ ಚಟುವಟಿಕೆಯನ್ನು ನಿಧಾನಗೊಳಿಸಿ ಮಂಪರು ಮತ್ತು ನಿದ್ರಾವಸ್ಥೆಯನ್ನು ಉಂಟುಮಾಡಿದರೆ, ಎನರ್ಜಿ ಡ್ರಿಂಕ್‌ಗಳಲ್ಲಿ ಇರುವ ಹೆಚ್ಚಿನ ಪ್ರಮಾಣದ ಕೆಫೀನ್ ಹಾಗೂ ಇತರ ಉತ್ತೇಜಕ ಅಂಶಗಳು ದೇಹವನ್ನು ಎಚ್ಚರ ಸ್ಥಿತಿಯಲ್ಲಿರಿಸುತ್ತವೆ.

ಈ ಎರಡು ವಿರುದ್ಧ ಗುಣಲಕ್ಷಣಗಳ ಸಂಯೋಜನೆಯಿಂದ ವ್ಯಕ್ತಿಗೆ ತಾನು ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ದಾನೆ ಎಂಬ ಅರಿವು ಕಡಿಮೆಯಾಗಬಹುದು. ಪರಿಣಾಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸುವ ಸಾಧ್ಯತೆ ಹೆಚ್ಚುತ್ತದೆ. ಇದು ಹೃದಯ ಬಡಿತದ ಅಸಹಜತೆ, ರಕ್ತದೊತ್ತಡದ ಏರಿಳಿತ, ಡಿಹೈಡ್ರೇಶನ್, ಆತಂಕ ಮತ್ತು ಹೃದಯಾಘಾತದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದರ ಜೊತೆಗೆ, ಯುವ ವಯಸ್ಸಿನಲ್ಲಿ ಈ ಮಿಶ್ರಣದ ನಿರಂತರ ಬಳಕೆ ಮೆದುಳಿನ ಬೆಳವಣಿಗೆ ಹಾಗೂ ನಿರ್ಧಾರ ಸಾಮರ್ಥ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಕ್ಷಣಿಕ ಉಲ್ಲಾಸಕ್ಕಾಗಿ ಅನುಸರಿಸುವ ಈ ಅಭ್ಯಾಸವು ಭವಿಷ್ಯದಲ್ಲಿ ಆರೋಗ್ಯದ ಮೇಲೆ ಭಾರೀ ಬೆಲೆ ತೆರಿಸಬಹುದು ಎಂಬ ಕಾರಣದಿಂದಲೇ ವೈದ್ಯಕೀಯ ತಜ್ಞರು ಮದ್ಯ ಮತ್ತು ಎನರ್ಜಿ ಡ್ರಿಂಕ್‌ಗಳ ಸಂಯೋಜನೆಯನ್ನು ಅಪಾಯಕಾರಿ ಪ್ರವೃತ್ತಿ ಎಂದು ಪರಿಗಣಿಸುತ್ತಿದ್ದಾರೆ.

ಈ ಮಿಶ್ರಣ ಅಪಾಯಕಾರಿ ಏಕೆ ?

ಸಾಮಾನ್ಯವಾಗಿ ಮದ್ಯವು ನರಮಂಡಲವನ್ನು ಶಮನಗೊಳಿಸಿ ನಿದ್ರೆ ಮತ್ತು ಮಂಪರು ಉಂಟುಮಾಡುತ್ತದೆ. ಆದರೆ ಎನರ್ಜಿ ಡ್ರಿಂಕ್‌ಗಳಲ್ಲಿ ಇರುವ ಹೆಚ್ಚಿನ ಪ್ರಮಾಣದ ಕೆಫೀನ್ ಮತ್ತು ಉತ್ತೇಜಕ ಪದಾರ್ಥಗಳು ದೇಹವನ್ನು ಎಚ್ಚರ ಸ್ಥಿತಿಯಲ್ಲಿರಿಸುತ್ತವೆ. ಈ ವಿರುದ್ಧ ಪರಿಣಾಮಗಳ ಕಾರಣ ವ್ಯಕ್ತಿಗೆ ತಾನು ಎಷ್ಟು ಪ್ರಮಾಣದ ಮದ್ಯ ಸೇವಿಸಿದ್ದಾನೆ ಎಂಬ ಅರಿವು ಕಡಿಮೆಯಾಗುತ್ತದೆ.

ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಪುನೀತ್ ಬಿಎಸ್ ಅವರು ಮಾತನಾಡಿ, ಎನರ್ಜಿ ಡ್ರಿಂಕ್ ಸೇವಿಸಿದ ನಂತರ ಮದ್ಯದ ಪರಿಣಾಮ ಕಡಿಮೆಯಾಗಿದೆ ಎಂದು ಭಾವಿಸಿ ಹಲವರು ಮತ್ತಷ್ಟು ಮದ್ಯ ಸೇವಿಸುತ್ತಾರೆ. ಇದರಿಂದ ಅತಿಯಾದ ಮದ್ಯಪಾನಕ್ಕೆ ದಾರಿಯಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಹೃದಯದ ಮೇಲೆ ಹೆಚ್ಚುವ ಒತ್ತಡ

ಸಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಪ್ರದೀಪ್ ಕುಮಾರ್ ಡಿ ಅವರು ಮಾತನಾಡಿ, ಕೆಫೀನ್‌ನ ಪರಿಣಾಮದಿಂದ ವ್ಯಕ್ತಿಗೆ ತಾನು ಎಷ್ಟು ಮತ್ತಿನಲ್ಲಿದ್ದಾನೆ ಎಂಬುದು ಸರಿಯಾಗಿ ತಿಳಿಯದೇ ಇರಬಹುದು. "ಎಚ್ಚರವಾಗಿರುವ ಅನುಭವ ಇರುವುದರಿಂದ ಜನರು ಇನ್ನಷ್ಟು ಮದ್ಯ ಸೇವಿಸುತ್ತಾರೆ. ಇದು ಅಸಹಜ ಹೃದಯ ಬಡಿತ, ರಕ್ತದೊತ್ತಡದ ಏರಿಳಿತ ಹಾಗೂ ಕೆಲವು ಸಂದರ್ಭಗಳಲ್ಲಿ ಹೃದಯಾಘಾತಕ್ಕೂ ಕಾರಣವಾಗಬಹುದು" ಎಂದು ಎಚ್ಚರಿಸಿದ್ದಾರೆ.

ಯುವಜನರಲ್ಲಿ ಅಪಾಯಕಾರಿ ವರ್ತನೆ ಹೆಚ್ಚಳ

ತಜ್ಞರ ಪ್ರಕಾರ, ಈ ಮಿಶ್ರಣ ಸೇವಿಸುವವರಲ್ಲಿ ಅತಿಯಾದ ಆತ್ಮವಿಶ್ವಾಸ, ಆಕ್ರಮಣಕಾರಿ ವರ್ತನೆ, ಅಪಾಯಕಾರಿ ಸಾಹಸಗಳಿಗೆ ಮುಂದಾಗುವುದು, ಕುಡಿದು ವಾಹನ ಚಲಾಯಿಸುವ ಪ್ರವೃತ್ತಿ, ಅಪಘಾತಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಡಿಹೈಡ್ರೇಶನ್ ಸಮಸ್ಯೆ

ಮದ್ಯ ಮತ್ತು ಕೆಫೀನ್ ಎರಡೂ ದೇಹದಿಂದ ನೀರನ್ನು ಹೊರಹಾಕುವ ಗುಣ ಹೊಂದಿವೆ. ಹೀಗಾಗಿ ಎರಡನ್ನೂ ಒಟ್ಟಿಗೆ ಸೇವಿಸಿದರೆ, ದೇಹದಲ್ಲಿ ನೀರಿನ ಕೊರತೆ, ತಲೆನೋವು, ತಲೆಸುತ್ತು, ದೌರ್ಬಲ್ಯ, ವಾಂತಿ ಮತ್ತು ಅಸ್ವಸ್ಥತೆ ಉಂಟಾಗುತ್ತದೆ.

ವೈದ್ಯರ ಸಲಹೆ ಏನು?

ಆರೋಗ್ಯ ತಜ್ಞರು ಮದ್ಯ ಮತ್ತು ಎನರ್ಜಿ ಡ್ರಿಂಕ್‌ಗಳನ್ನು ಒಟ್ಟಿಗೆ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸುವಂತೆ ಸಲಹೆ ನೀಡಿದ್ದಾರೆ.

ವಿಶೇಷವಾಗಿ ಯುವಕರು ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿರುವವರು ಈ ಅಭ್ಯಾಸದಿಂದ ದೂರವಿರುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.

ಒಟ್ಟಾರೆ ಎನರ್ಜಿ ಡ್ರಿಂಕ್ ಮದ್ಯದ ಮತ್ತನ್ನು ಕಡಿಮೆ ಮಾಡುವುದಿಲ್ಲ; ಬದಲಿಗೆ ಮತ್ತಿನ ಅರಿವನ್ನು ಮರೆಮಾಚುತ್ತದೆ. ಇದರಿಂದ ವ್ಯಕ್ತಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿ ಹೃದಯ, ಮೆದುಳು ಮತ್ತು ಒಟ್ಟಾರೆ ಆರೋಗ್ಯವನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಕ್ಷಣಿಕ ಉಲ್ಲಾಸಕ್ಕಾಗಿ ಮಾಡುವ ಈ ಅಭ್ಯಾಸವು ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ-ಇರಾನ್ ಶಾಂತಿ ಒಪ್ಪಂದ 'ಈಗ ಸಂಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ!

ರಾಜ್ಯದಲ್ಲಿ ಮುಂಗಾರು ಚುರುಕು: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ yellow ಅಲರ್ಟ್, ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ಜಗತ್ತನ್ನು ಬೆರಗುಗೊಳಿಸಿದ ಮಾನವ ನಿರ್ಮಿತ ಅದ್ಭುತಗಳು: ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಿವು..!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲ: TMC ಬಂಡಾಯ ಗುಂಪು ಕಾಕೋಲಿ ಘೋಷ್ ನೇತೃತ್ವದಲ್ಲಿ NCP ಜೊತೆ ವಿಲೀನ!

ಜ್ವಾಲಾಮುಖಿ ಕುಳಿಗೆ ಬಿದ್ದ 'ಯೆಮೆನ್‌ನ ಸ್ಪೈಡರ್-ಮ್ಯಾನ್': ದುರಂತ ಕ್ಯಾಮೆರಾದಲ್ಲಿ ಸೆರೆ! Video

SCROLL FOR NEXT