ಹೆಚ್ಚಿದ ಬೇಡಿಕೆ: ಅಂಗಾಂಗ ಕಸಿಗೆ ಕಾಯುತ್ತಿರುವ 1 ಲಕ್ಷಕ್ಕೂ ಅಧಿಕ ಭಾರತೀಯರು; ಪ್ರತಿ 20 ನಿಮಿಷಕ್ಕೊಮ್ಮೆ ಹೊಸ ರೋಗಿ ಸೇರ್ಪಡೆ !
ಅಂಗಾಂಗಗಳ ಬೇಡಿಕೆ ಪೂರೈಕೆಗಿಂತ ಹೆಚ್ಚಿರುವುದರಿಂದ ಇನ್ನೂ ಹೆಚ್ಚಿನ ಜೀವಗಳನ್ನು ಉಳಿಸುವ ಅವಕಾಶವಿದ್ದರೂ, ಅನೇಕ ರೋಗಿಗಳಿಗೆ ಅಂಗಾಂಗ ಕಸಿ ಸೌಲಭ್ಯ ದೊರೆಯುತ್ತಿಲ್ಲ
ನವದೆಹಲಿ: ಭಾರತದಲ್ಲಿ ಅಂಗಾಂಗ ಕಸಿ ಮಾಡಿಸಿಕೊಳ್ಳಲು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಬಯಸುತ್ತಿದ್ದಾರೆ. ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಪ್ರತಿ 20 ನಿಮಿಷಕ್ಕೊಮ್ಮೆ ಹೊಸ ರೋಗಿಯೊಬ್ಬರು ಅಂಗಾಂಗ ಕಸಿ ನಿರೀಕ್ಷೆಯ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದಾರೆ.
ದೇಶದಲ್ಲಿ ಪ್ರತಿ ವರ್ಷ 1.75 ಲಕ್ಷದಿಂದ 2 ಲಕ್ಷದವರೆಗೆ ಮೂತ್ರಪಿಂಡ ಕಸಿ ಮಾಡುವ ಅಗತ್ಯವಿದೆ. ನವೆಂಬರ್ 5ರ ವೇಳೆಗೆ ಸುಮಾರು 80 ಸಾವಿರ ರೋಗಿಗಳು ಮೂತ್ರಪಿಂಡ ಕಸಿಗಾಗಿ ಕಾಯುವ ಪಟ್ಟಿಯಲ್ಲಿದ್ದರು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ನಿರ್ದೇಶಕ ಡಾ. ಅನಿಲ್ ಕುಮಾರ್ ತಿಳಿಸಿದ್ದಾರೆ.
ಭಾರತೀಯ ಮಹಿಳಾ ಪತ್ರಕರ್ತರ ಸಂಘದಲ್ಲಿ (IWPC) ಪತ್ರಕರ್ತರೊಂದಿಗೆ ಮಾತನಾಡಿದ ಡಾ. ಕುಮಾರ್, ನವೆಂಬರ್ 5ರ ವೇಳೆಗೆ ಭಾರತದಲ್ಲಿ 20,138 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಆದರೆ, ಅಂಗಾಂಗಗಳ ಬೇಡಿಕೆ ಪೂರೈಕೆಗಿಂತ ಹೆಚ್ಚಿರುವುದರಿಂದ ಇನ್ನೂ ಹೆಚ್ಚಿನ ಜೀವಗಳನ್ನು ಉಳಿಸುವ ಅವಕಾಶವಿದ್ದರೂ, ಅನೇಕ ರೋಗಿಗಳಿಗೆ ಅಂಗಾಂಗ ಕಸಿ ಸೌಲಭ್ಯ ದೊರೆಯುತ್ತಿಲ್ಲ ಎಂದು ತಿಳಿಸಿದರು.
ನೋಟೊ ನೋಂದಣಿಯಲ್ಲಿ ಅಂಗಾಂಗ ಕಸಿಗೆ ಕಾಯುವವರ ಪಟ್ಟಿಗೆ ಪ್ರತಿ 20 ನಿಮಿಷಕ್ಕೊಮ್ಮೆ ಒಬ್ಬ ರೋಗಿ ಸೇರ್ಪಡೆಯಾಗುತ್ತಿದ್ದಾರೆ. ಕಾಯುವವರ ಸಂಖ್ಯೆ ಬಹಳ ದೊಡ್ಡದಿದೆ. ಜಾಗತಿಕ ಅಂಕಿಅಂಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮರಣಾನಂತರದ ಅಂಗಾಂಗ ದಾನಕ್ಕಿಂತ ಜೀವಂತ ವ್ಯಕ್ತಿಗಳಿಂದ ಅಂಗಾಂಗ ದಾನವೇ ಹೆಚ್ಚಾಗಿದೆ. ಕೇವಲ 1,235 ಮರಣಾನಂತರದ ಅಂಗಾಂಗ ದಾನಗಳು ನಡೆದಿವೆ. ಇದು ಅತ್ಯಂತ ಕಡಿಮೆ ಪ್ರಮಾಣವಾಗಿದೆ ಎಂದು ಹೇಳಿದರು.
ಭಾರತದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 0.87ರಷ್ಟು ಅಂಗಾಂಗ ದಾನ ಪ್ರಮಾಣ ದಾಖಲಾಗಿದೆ. ಇದೇ ಅವಧಿಯಲ್ಲಿ ಸ್ಪೇನ್ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಮರಣಾನಂತರದ ಅಂಗಾಂಗ ದಾನ ಪ್ರಮಾಣ ಹೊಂದಿದ್ದು, ಪ್ರತಿ 10 ಲಕ್ಷ ಜನಸಂಖ್ಯೆಗೆ 50 ದಾನಿಗಳು ದಾಖಲಾಗಿದ್ದಾರೆ. ಅಮೆರಿಕದಲ್ಲಿ ಈ ಪ್ರಮಾಣ 40ಕ್ಕಿಂತ ಹೆಚ್ಚು ದಾನಿಗಳಿದ್ದರೆ, ಆಸ್ಟ್ರೇಲಿಯಾದಲ್ಲಿ 25ರಿಂದ 30ರಷ್ಟಿದೆ.
ಭಾರತದಲ್ಲಿ ಮೂತ್ರಪಿಂಡ ದಾನಕ್ಕೆ ಹೆಚ್ಚಿನ ಬೇಡಿಕೆಯಿರುವುದರ ಜೊತೆಗೆ, ಸುಮಾರು 50 ಸಾವಿರ ಯಕೃತ್ತು ಮತ್ತು ಹೃದಯ ಅಂಗಾಂಗಗಳ ಅಗತ್ಯವೂ ಇದೆ. ನವೆಂಬರ್ 5ರ ವೇಳೆಗೆ 24,000ಕ್ಕೂ ಹೆಚ್ಚು ಮಂದಿ ಯಕೃತ್ತು ಕಸಿಗಾಗಿ ಕಾಯುತ್ತಿದ್ದರೆ, 1,931 ಮಂದಿ ಹೃದಯ ಕಸಿಗಾಗಿ ಕಾಯುತ್ತಿದ್ದರು. ದೇಶಾದ್ಯಂತ ಒಟ್ಟು 1,05,437 ಮಂದಿ ಅಂಗಾಂಗ ಕಸಿಗಾಗಿ ಕಾಯುವ ಪಟ್ಟಿಯಲ್ಲಿದ್ದರು ಎಂದು ಅವರು ತಿಳಿಸಿದರು.
ನವೆಂಬರ್ 5ರ ವೇಳೆಗೆ 14,000ಕ್ಕೂ ಹೆಚ್ಚು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿದ್ದರೆ, ಇದೇ ಅವಧಿಯಲ್ಲಿ 5,154 ಯಕೃತ್ತು ಕಸಿ ಶಸ್ತ್ರಚಿಕಿತ್ಸೆಗಳು ನಡೆದಿವೆ.
ಮರಣಾನಂತರದ ಅಂಗಾಂಗ ದಾನ ಪ್ರಮಾಣ ಕಡಿಮೆಯಾಗಲು ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆಗಳ ಕೊರತೆ ಹಾಗೂ ವೈದ್ಯರು ಈ ನಿಟ್ಟಿನಲ್ಲಿ ಸ್ವಯಂಪ್ರೇರಿತವಾಗಿ ಉಪಕ್ರಮ ಕೈಗೊಳ್ಳದಿರುವುದು ಪ್ರಮುಖ ಕಾರಣಗಳಾಗಿವೆ ಎಂದು ಡಾ. ಕುಮಾರ್ ಹೇಳಿದರು.
ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತದಲ್ಲಿ ಜೀವಂತ ವ್ಯಕ್ತಿಗಳಿಂದ ಅಂಗಾಂಗ ದಾನ ಹೆಚ್ಚು. ಭಾರತೀಯರು ಕುಟುಂಬದೊಂದಿಗೆ ಹೆಚ್ಚು ಬಾಂಧವ್ಯ ಹೊಂದಿರುವುದರಿಂದ ಮರಣಾನಂತರದ ಅಂಗಾಂಗ ದಾನಕ್ಕಿಂತ ಜೀವಂತ ವ್ಯಕ್ತಿಗಳಿಂದ ದಾನ ಮಾಡುವ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದರು.
2025ರಲ್ಲಿ ತಮಿಳುನಾಡು 266 ಮರಣಾನಂತರದ ಅಂಗಾಂಗ ದಾನಗಳೊಂದಿಗೆ ದೇಶದ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿತ್ತು. ತೆಲಂಗಾಣ 205 ದಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕ 198, ಮಹಾರಾಷ್ಟ್ರ 154, ಗುಜರಾತ್ 152 ಮತ್ತು ಆಂಧ್ರಪ್ರದೇಶ 93 ದಾನಗಳನ್ನು ದಾಖಲಿಸಿವೆ.
ಕಳೆದ ವರ್ಷ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಕೇವಲ 33 ಮರಣಾನಂತರದ ಅಂಗಾಂಗ ದಾನಗಳು ನಡೆದಿದ್ದರೂ, ಅತಿ ಹೆಚ್ಚು ಅಂದರೆ 4,564 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿವೆ ಎಂದು ಡಾ. ಕುಮಾರ್ ತಿಳಿಸಿದರು. ತಮಿಳುನಾಡಿನಲ್ಲಿ 2,796, ಮಹಾರಾಷ್ಟ್ರದಲ್ಲಿ 2,136, ತೆಲಂಗಾಣದಲ್ಲಿ 1,523, ಕೇರಳದಲ್ಲಿ 1,489 ಮತ್ತು ಗುಜರಾತ್‌ನಲ್ಲಿ 1,379 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿವೆ.
2025ರಲ್ಲಿ ನಡೆದ ಒಟ್ಟು 20,138 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳಲ್ಲಿ ಶೇ.82ರಷ್ಟು ಅಂದರೆ 16,612 ಕಸಿಗಳು ಜೀವಂತ ದಾನಿಗಳಿಂದ ನಡೆದಿವೆ. ಉಳಿದ ಶೇ.18ರಷ್ಟು ಅಂದರೆ 3,526 ಕಸಿಗಳು ಮರಣಾನಂತರದ ದಾನಿಗಳಿಂದ ನಡೆದಿವೆ.
ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಅಮೆರಿಕ 49,920 ಕಸಿ ಶಸ್ತ್ರಚಿಕಿತ್ಸೆಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಚೀನಾ 25,800 ಶಸ್ತ್ರಚಿಕಿತ್ಸೆಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.