ಕಿವಿಗೆ ಇಯರ್ ಬಡ್ಸ್ ಹಾಕುವ ಮುನ್ನ ಈ ಸತ್ಯ ತಿಳಿದುಕೊಳ್ಳಿ: ಇಲ್ಲಾಂದ್ರೆ, ಕೇಳುವ ಶಕ್ತಿಯೇ ಹೋಗಬಹುದು ಎಚ್ಚರ!
ಕಿವಿ ಕೊಳೆಯಾಗಿದೆ ಎಂದು ಪ್ರತಿದಿನ ಬಡ್ಸ್ ಹಾಕಿ ಚಿವುಟುವ ಅಭ್ಯಾಸ ಅನೇಕರಿಗೆ ಇದೆ. ಆದರೆ ಕಿವಿಯನ್ನು ಸ್ವಚ್ಛ ಮಾಡುತ್ತೇವೆ ಎಂದು ಮಾಡುವ ಸಣ್ಣ ತಪ್ಪೇ ದೊಡ್ಡ ಸೋಂಕಿಗೆ, ಕಿವಿ ನೋವಿಗೆ, ಕೆಲವೊಮ್ಮೆ ಕಿವುಡಾಗುವುದಕ್ಕೂ ಕಾರಣವಾಗುತ್ತದೆ. ಆ ಕುರಿತ ಮಾಹಿತಿ ಇಲ್ಲಿದೆ:
Health Tips: ಸ್ನಾನ ಮಾಡಿದ ತಕ್ಷಣ ಕಿವಿಯಲ್ಲಿ ಗುಗ್ಗೆ ಇದೆ ಎಂದು ಇಯರ್ ಬಡ್ಸ್ ಹಾಕಿ ಸ್ವಚ್ಛಗೊಳಿಸುವ ಅಭ್ಯಾಸ ನಿಮಗೂ ಇದೆಯಾ. ಹಾಗಾದರೆ ಒಂದು ನಿಮಿಷ ನಿಲ್ಲಿ. ಕಿವಿಯಲ್ಲಿ ಕಾಣುವ ಆ ಗುಗ್ಗೆ ಕೊಳಕು ಅಲ್ಲ. ಅದು ಕಿವಿಯನ್ನು ಕಾಪಾಡಲು ದೇಹವೇ ಮಾಡಿರುವ ರಕ್ಷಣೆ. ಅದನ್ನು ತೆಗೆಯಲು ಹೋಗಿ ನಾವು ಮಾಡುವ ಸಣ್ಣ ತಪ್ಪು ಕಿವಿಯೊಳಗೆ ಗಾಯ, ಸೋಂಕು ಮತ್ತು ಕೇಳುವಿಕೆಯ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಕಿವಿ ಸ್ವಚ್ಛಗೊಳಿಸುವಾಗ ಹೆಚ್ಚಿನವರು ಮಾಡುವ ತಪ್ಪುಗಳು ಯಾವುವು, ಗುಗ್ಗೆಯನ್ನು ನಿಜವಾಗಿಯೂ ತೆಗೆಯಬೇಕಾ, ಸರಿಯಾದ ವಿಧಾನ ಯಾವುದು ಎಂದು ತಿಳಿದುಕೊಂಡರೆ ನಿಮ್ಮ ಕಿವಿಯನ್ನು ನೀವು ಸುಲಭವಾಗಿ ಕಾಪಾಡಿಕೊಳ್ಳಬಹುದು. ಆ ಕುರಿತ ವರದಿ ಇಲ್ಲಿದೆ:
ಇಯರ್ ಬಡ್ಸ್ ಒಳಗೆ ಹಾಕುವ ತಪ್ಪು:
ಹೆಚ್ಚಿನವರು ಮಾಡುವ ದೊಡ್ಡ ತಪ್ಪು ಇಯರ್ ಬಡ್ಸ್ ಕಿವಿಯೊಳಗೆ ಹಾಕುವುದು. ಇದು ಗುಗ್ಗೆಯನ್ನು ಹೊರಗೆ ತೆಗೆಯುವುದಿಲ್ಲ, ಬದಲಿಗೆ ಇನ್ನೂ ಒಳಗೆ ತಳ್ಳುತ್ತದೆ. ಗುಗ್ಗೆ ಗಟ್ಟಿಯಾಗಿ ಕಿವಿ ಮುಚ್ಚಿಕೊಳ್ಳುತ್ತದೆ. ಕಿವಿಯ ಸೂಕ್ಷ್ಮ ಚರ್ಮ ಗೀರಿದರೆ ಸೋಂಕು ಬರಬಹುದು. ಕೆಲವೊಮ್ಮೆ ಹತ್ತಿ ಒಳಗೇ ಉಳಿದು ಸೋಂಕು ಹೆಚ್ಚಾಗುತ್ತದೆ. ಕಿವಿ ಪರದೆಗೆ ಗಾಯವಾದರೆ ಕೇಳುವ ಶಕ್ತಿಗೆ ತೊಂದರೆ ಆಗಬಹುದು. ಆದ್ದರಿಂದ ಕಿವಿಯೊಳಗೆ ಇಯರ್ ಬಡ್ಸ್, ಬೆರಳು ಅಥವಾ ಯಾವುದೇ ವಸ್ತು ಹಾಕಬಾರದು. ಮಕ್ಕಳ ಕಿವಿಯನ್ನು ಇಯರ್ ಬಡ್ಸ್ ನಿಂದ ಸ್ವಚ್ಛಗೊಳಿಸುವುದು ಇನ್ನೂ ಹೆಚ್ಚು ಅಪಾಯಕಾರಿ.
ಪಿನ್ ಮತ್ತು ಕಡ್ಡಿ ಬಳಸುವ ತಪ್ಪು
ಪಿನ್, ಕೀ, ಬೆಂಕಿಕಡ್ಡಿ, ಕೂದಲಿನ ಕ್ಲಿಪ್ ಬಳಸಿ ಕಿವಿ ಕೆರೆಯುವುದು ಇನ್ನೂ ಅಪಾಯಕಾರಿ. ಇವು ಕಿವಿಯೊಳಗಿನ ಚರ್ಮವನ್ನು ಸುಲಭವಾಗಿ ಹರಿದು ಹಾಕುತ್ತವೆ. ರಕ್ತ ಬರುವುದು, ನೋವು, ಸೋಂಕು ಇದರಿಂದ ಶುರುವಾಗಬಹುದು. ಕಿವಿಯಲ್ಲಿ ಏನಾದರೂ ಸಿಲುಕಿಕೊಂಡರೆ ಅಥವಾ ಕೀಟ ಹೋದರೆ ಮನೆಯಲ್ಲಿ ತೆಗೆಯಲು ಪ್ರಯತ್ನಿಸಬೇಡಿ. ವೈದ್ಯರ ಬಳಿ ಹೋಗುವುದು ಸುರಕ್ಷಿತ. ಇಯರ್ ಕ್ಯಾಂಡಲ್ ನಂತಹ ವಿಧಾನಗಳನ್ನು ಬಳಸಬೇಡಿ. ಇವು ಕಿವಿಗೆ ಸುಟ್ಟ ಗಾಯ ಮತ್ತು ಸೋಂಕು ತರಬಹುದು.
ಜೋರಾಗಿ ಗೊರಕೆ ಹೊಡೆಯುವ ಅಭ್ಯಾಸವಿದೆಯಾ? ಹಾಗಾದ್ರೆ ಜೋಕೆ, ಈ ಕಾಯಿಲೆ ನಿಮ್ಮ ಪುರುಷತ್ವದ ಮೇಲೂ ಪರಿಣಾಮ ಬೀರಬಹುದು!
ಎಣ್ಣೆ ಮತ್ತು ಮನೆಮದ್ದು ಹಾಕುವ ತಪ್ಪು
ಕಿವಿ ನೋವು ಬಂದಾಗ ಎಣ್ಣೆ, ಬೆಳ್ಳುಳ್ಳಿ ಎಣಣೆ ಅಥವಾ ಇತರ ಮನೆಮದ್ದು ಹಾಕುವ ಅಭ್ಯಾಸ ಅನೇಕರಿಗೆ ಇದೆ. ಕಿವಿ ಪರದೆಗೆ ರಂಧ್ರ ಇದ್ದರೆ ಅಥವಾ ಸೋಂಕು ಇದ್ದರೆ ಇದು ಪರಿಸ್ಥಿತಿಯನ್ನು ಇನ್ನಷ್ಟು ಹಾಳು ಮಾಡಬಹುದು. ವೈದ್ಯರ ಸಲಹೆ ಇಲ್ಲದೆ ಕಿವಿಯಲ್ಲಿ ಯಾವುದೇ ದ್ರವ, ಡ್ರಾಪ್ಸ್ ಅಥವಾ ಎಣ್ಣೆ ಹಾಕಬೇಡಿ. ಆಗಾಗ ಕಿವಿ ತೊಳೆಯುವುದು, ಗಟ್ಟಿಯಾಗಿ ಉಜ್ಜುವುದು ಕೂಡ ಸರಿಯಲ್ಲ. ಇದು ಕಿವಿಯ ರಕ್ಷಣಾತ್ಮಕ ಗುಗ್ಗೆಯನ್ನು ತೆಗೆದು ಕಿವಿಯನ್ನು ಒಣಗಿಸಿ ತುರಿಕೆಗೆ ಕಾರಣವಾಗಬಹುದು. ಕೊಳಕು ನೀರಿನಲ್ಲಿ ಈಜುವುದು ಕೂಡ ಸೋಂಕಿಗೆ ಕಾರಣವಾಗಬಹುದು.
ಹಾಗಾದ್ರೆ, ಸರಿಯಾದ ವಿಧಾನ ಯಾವುದು?
ಕಿವಿಯನ್ನು ಸ್ವಚ್ಛಗೊಳಿಸಲು ಹೊರಭಾಗವನ್ನು ಮಾತ್ರ ಮೃದುವಾದ ಬಟ್ಟೆಯಿಂದ ಒರೆಸಿದರೆ ಸಾಕು. ಸ್ನಾನದ ನಂತರ ಹೊರ ಕಿವಿಯನ್ನು ನಿಧಾನವಾಗಿ ಒರೆಸಿ. ಕಿವಿ ಒಣಗಿರುವಂತೆ ನೋಡಿಕೊಳ್ಳಿ. ಇಯರ್ ಫೋನ್ ಹಂಚಿಕೊಳ್ಳಬೇಡಿ. ಜೋರಾದ ಶಬ್ದದಿಂದ ಕಿವಿಯನ್ನು ಕಾಪಾಡಿಕೊಳ್ಳಿ. ಕಿವಿ ನೋವು, ಕೀವು, ಕೇಳಿಸುವಿಕೆ ಕಡಿಮೆಯಾಗುವುದು, ಕಿವಿಯಲ್ಲಿ ಗುಂಯ್ ಎಂಬ ಶಬ್ದ, ತಲೆಸುತ್ತು ಕಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಗುಗ್ಗೆ ಹೆಚ್ಚಾಗಿ ಕೇಳುವಿಕೆಗೆ ತೊಂದರೆ ಕೊಟ್ಟರೆ ಅದನ್ನು ತರಬೇತಿ ಪಡೆದ ವೈದ್ಯರೇ ತೆಗೆಯಬೇಕು.