‘ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆ’ ಅಥವಾ ಸಿಕೆಡಿ ಎಂದಾಕ್ಷಣ ಹಲವರ ಮನಸ್ಸಿನಲ್ಲಿ ಮೊದಲು ಮೂಡುವ ಚಿತ್ರ ಡಯಾಲಿಸಿಸ್. ಆದರೆ ಕಿಡ್ನಿ ಕಾಯಿಲೆ ಪತ್ತೆಯಾಗಿದೆ ಎಂದ ಮಾತ್ರಕ್ಕೆ ಮೂತ್ರಪಿಂಡಗಳು ಸಂಪೂರ್ಣವಾಗಿ ವಿಫಲವಾಗಿವೆ ಅಥವಾ ಮುಂದೆ ಡಯಾಲಿಸಿಸ್ ಮಾಡಿಸಿಕೊಳ್ಳಲೇಬೇಕು ಎಂದರ್ಥವಲ್ಲ.
ಕಾಯಿಲೆಯ ಹಂತ, ಕಾರಣ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಇದರ ಪರಿಣಾಮಗಳು ಬದಲಾಗುತ್ತವೆ. ಹೀಗಾಗಿ ಕಿಡ್ನಿ ಕಾಯಿಲೆಯ ಬಗ್ಗೆ ವರ್ಷಗಳಿಂದ ಹರಡಿರುವ ಕೆಲವು ತಪ್ಪು ಕಲ್ಪನೆಗಳು ಅನಗತ್ಯ ಆತಂಕಕ್ಕೆ ಕಾರಣವಾಗುತ್ತಿವೆ.
ತಜ್ಞ ವೈದ್ಯರ ಪ್ರಕಾರ, ಆರಂಭಿಕ ಹಂತದಲ್ಲೇ ಕಾಯಿಲೆಯನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಹಾಗೂ ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡರೆ ಕಿಡ್ನಿಯ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳವುದು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆ ಬಗ್ಗೆ ಜನರಲ್ಲಿ ಇರುವ ಐದು ಪ್ರಮುಖ ತಪ್ಪು ಕಲ್ಪನೆಗಳು ಇಲ್ಲಿವೆ...
ಮಿಥ್ಯ 1: ಸಿಕೆಡಿ ಪತ್ತೆಯಾದರೆ ಡಯಾಲಿಸಿಸ್ ಮಾಡಿಸಿಕೊಳ್ಳಲೇಬೇಕು...
ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆ ಪತ್ತೆಯಾಗುತ್ತಿದ್ದಂತೆ ಅದು ಮುಂದೊಂದು ದಿನ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಿ ಡಯಾಲಿಸಿಸ್ ಅನಿವಾರ್ಯವಾಗುತ್ತದೆ ಎಂಬ ಭಯ ಕೆಲವರಲ್ಲಿರುತ್ತದೆ. ಆದರೆ, ಸಿಕೆಡಿ ವಿವಿಧ ಹಂತಗಳನ್ನು ಹೊಂದಿರುವ ಕಾಯಿಲೆಯಾಗಿದ್ದು, ಪ್ರತಿಯೊಬ್ಬ ರೋಗಿಯಲ್ಲೂ ಅದರ ಬೆಳವಣಿಗೆ ಒಂದೇ ರೀತಿಯಾಗಿರುವುದಿಲ್ಲ.
ದೆಹಲಿ ಸಿಕೆ ಬಿರ್ಲಾ ಆಸ್ಪತ್ರೆಯ ಸಲಹಾ ಮೂತ್ರಪಿಂಡ ತಜ್ಞ ಡಾ. ವಿಕ್ರಮ್ ಕಲ್ರಾ ಅವರ ಪ್ರಕಾರ, ಸಿಕೆಡಿ ಎಂದರೆ ಡಯಾಲಿಸಿಸ್‌ಗೆ ಹೋಗುವುದು ಖಚಿತ ಎಂಬುದಲ್ಲ. ಬಹುತೇಕ ರೋಗಿಗಳು ಡಯಾಲಿಸಿಸ್ ಅವಲಂಬಿಸುವ ಹಂತವನ್ನು ತಲುಪುವುದಿಲ್ಲ. ಆರಂಭದಲ್ಲೇ ಕಾಯಿಲೆ ಪತ್ತೆಯಾಗಿ ಸೂಕ್ತ ಚಿಕಿತ್ಸೆ ದೊರೆತರೆ, ಆಹಾರ ಕ್ರಮ ಮತ್ತು ಔಷಧೋಪಚಾರದ ಮೂಲಕ ಅದನ್ನು ನಿಯಂತ್ರಣದಲ್ಲಿಡಲು ಸಾಧ್ಯ.
ದ್ವಾರಕಾದ ಆಕಾಶ್ ಹೆಲ್ತ್‌ಕೇರ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಹೆಚ್ಚುವರಿ ನಿರ್ದೇಶಕ ಹಾಗೂ ಮೂತ್ರಪಿಂಡ ಮತ್ತು ಕಿಡ್ನಿ ಕಸಿ ತಜ್ಞ ಡಾ. ಅನುಪಮ್ ರಾಯ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಿಡ್ನಿ ಕಾಯಿಲೆ ಪತ್ತೆಯಾದ ತಕ್ಷಣ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗುತ್ತದೆ ಎಂಬ ಆತಂಕ ಅನಗತ್ಯ. ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆಯಾದರೆ ಮೂತ್ರಪಿಂಡದ ಕಾರ್ಯವನ್ನು ಸಾಧ್ಯವಾದಷ್ಟು ಕಾಪಾಡಿಕೊಳ್ಳಲು ಚಿಕಿತ್ಸೆ ನೆರವಾಗುತ್ತದೆ ಎಂದು ಹೇಳಿದ್ದಾರೆ.
ಮಿಥ್ಯ 2: ಯಾವುದೇ ಲಕ್ಷಣಗಳಿಲ್ಲ ಎಂದರೆ ಕಿಡ್ನಿ ಆರೋಗ್ಯವಾಗಿಯೇ ಎಂದರ್ಥ...
ಕಿಡ್ನಿ ಕಾಯಿಲೆಯ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು. ಕಾಯಿಲೆ ನಿಧಾನವಾಗಿ ಮುಂದುವರಿಯುತ್ತಿರುವುದು ವ್ಯಕ್ತಿಗೆ ಗೊತ್ತಾಗದೇ ಹೋಗಬಹುದು ಎಂದು ಡಾ. ಕಲ್ರಾ ಹೇಳಿದ್ದಾರೆ.
ಹೀಗಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಇತರ ಅಪಾಯಕಾರಿ ಅಂಶಗಳಿರುವವರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ. ರಕ್ತದಲ್ಲಿನ ಸೀರಮ್ ಕ್ರಿಯಾಟಿನಿನ್ ಪರೀಕ್ಷೆಯ ಮೂಲಕ ಅಂದಾಜು ಜಿಎಫ್‌ಆರ್ ಸೇರಿದಂತೆ ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ಪರಿಶೀಲಿಸಬಹುದು. ಮೂತ್ರ ಪರೀಕ್ಷೆಯೂ ಕಿಡ್ನಿಯ ಆರೋಗ್ಯದ ಕುರಿತು ಪ್ರಮುಖ ಮಾಹಿತಿಯನ್ನು ನೀಡುತ್ತದೆ ಎಂದು ಡಾ. ರಾಯ್ ತಿಳಿಸಿದ್ದಾರೆ.
ಅಂದರೆ, ಯಾವುದೇ ನೋವು, ಊತ ಅಥವಾ ಇತರ ಲಕ್ಷಣಗಳಿಲ್ಲ ಎಂಬ ಕಾರಣಕ್ಕೆ ಕಿಡ್ನಿ ಸಂಪೂರ್ಣ ಆರೋಗ್ಯವಾಗಿದೆ ಎಂದು ನಿರ್ಧರಿಸುವುದು ಸರಿಯಲ್ಲ.
ಮಿಥ್ಯ 3: ಹೆಚ್ಚು ನೀರು ಕುಡಿದರೆ ಕಿಡ್ನಿ ಕಾಯಿಲೆ ಗುಣವಾಗುತ್ತದೆ; ಒಮ್ಮೆ ಕಾಯಿಲೆ ಬಂದರೆ ಏನೂ ಮಾಡಲು ಸಾಧ್ಯವಿಲ್ಲ...
ಸಾಕಷ್ಟು ನೀರು ಕುಡಿಯುವುದು ಆರೋಗ್ಯಕ್ಕೆ ಮುಖ್ಯವಾದರೂ, ಹೆಚ್ಚು ನೀರು ಸೇವಿಸುವುದರಿಂದ ಕಿಡ್ನಿ ಹಾನಿ ಗುಣವಾಗುತ್ತದೆ ಎಂಬುದು ತಪ್ಪು ಕಲ್ಪನೆ. ಪ್ರತಿಯೊಬ್ಬರಿಗೂ ಅಗತ್ಯವಿರುವ ದ್ರವದ ಪ್ರಮಾಣ ಒಂದೇ ಆಗಿರುವುದಿಲ್ಲ. ಮೂತ್ರಪಿಂಡದ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿಯನ್ನು ಆಧರಿಸಿ ದ್ರವ ಸೇವನೆಯ ಪ್ರಮಾಣ ಬದಲಾಗಬಹುದು ಎಂದು ಡಾ. ಕಲ್ರಾ ಹೇಳಿದ್ದಾರೆ.
ಇನ್ನು, ಕಿಡ್ನಿ ಕಾಯಿಲೆ ಆರಂಭವಾದ ಬಳಿಕ ಯಾವುದೇ ಚಿಕಿತ್ಸೆ ಪ್ರಯೋಜನಕಾರಿಯಾಗುವುದಿಲ್ಲ ಎಂಬ ನಂಬಿಕೆಯೂ ತಪ್ಪು. ಕಾಯಿಲೆಯ ಕಾರಣ ಮತ್ತು ಹಂತವನ್ನು ಅವಲಂಬಿಸಿ ಸೂಕ್ತ ಚಿಕಿತ್ಸೆ ಅದರ ಪ್ರಗತಿಯನ್ನು ಗಣನೀಯವಾಗಿ ನಿಧಾನಗೊಳಿಸಬಹುದು ಎಂದು ಡಾ. ರಾಯ್ ಹೇಳಿದ್ದಾರೆ.
ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು, ವೈದ್ಯರ ಸಲಹೆಯಂತೆ ಆಹಾರ ಕ್ರಮ ಬದಲಿಸಿಕೊಳ್ಳುವುದು ಹಾಗೂ ಸೂಚಿಸಲಾದ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದು ಕಿಡ್ನಿ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮಿಥ್ಯ 4: ಕಿಡ್ನಿ ಕಾಯಿಲೆ ಮೂತ್ರಪಿಂಡಗಳ ಮೇಲಷ್ಟೇ ಪರಿಣಾಮ ಬೀರುತ್ತದೆ; ಅದು ಯಾವಾಗಲೂ ಶಾಶ್ವತ
ಮೂತ್ರಪಿಂಡಗಳ ಕಾರ್ಯದಲ್ಲಿ ದೀರ್ಘಕಾಲಿಕ ಸಮಸ್ಯೆ ಉಂಟಾದರೆ ಅದರ ಪರಿಣಾಮ ದೇಹದ ಇತರ ಭಾಗಗಳ ಮೇಲೂ ಬೀಳಬಹುದು. ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಆರೋಗ್ಯ, ಮೂಳೆಗಳು ಹಾಗೂ ದೇಹದಲ್ಲಿನ ಖನಿಜಗಳ ಸಮತೋಲನದ ಮೇಲೂ ಪರಿಣಾಮ ಉಂಟಾಗಬಹುದು. ಹೀಗಾಗಿ ಕಿಡ್ನಿ ಕಾಯಿಲೆ ಇರುವವರು ನಿಯಮಿತ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಬೇಕಾಗುತ್ತದೆ ಎಂದು ಡಾ. ಕಲ್ರಾ ಹೇಳಿದ್ದಾರೆ.
ಅದೇ ವೇಳೆ ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆ ಮತ್ತು ತೀವ್ರ ಮೂತ್ರಪಿಂಡ ಹಾನಿ ಎರಡೂ ಒಂದೇ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಸಿಕೆಡಿ ಎಂದರೆ ಮೂತ್ರಪಿಂಡದಲ್ಲಿ ದೀರ್ಘಕಾಲದಿಂದ ಮುಂದುವರಿಯುತ್ತಿರುವ ಸಮಸ್ಯೆ. ಆದರೆ, ತೀವ್ರ ಮೂತ್ರಪಿಂಡ ಹಾನಿ ಏಕಾಏಕಿ ಉಂಟಾಗಬಹುದು. ತೀವ್ರ ಅನಾರೋಗ್ಯ, ದೇಹದಲ್ಲಿ ನೀರಿನ ಕೊರತೆ ಅಥವಾ ಕೆಲವು ಔಷಧಿಗಳಂತಹ ಕಾರಣಗಳಿಂದ ಇದು ಸಂಭವಿಸಬಹುದು.
ಕಾರಣವನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಕೆಲವು ಸಂದರ್ಭಗಳಲ್ಲಿ ತೀವ್ರ ಮೂತ್ರಪಿಂಡ ಹಾನಿಯಿಂದ ಚೇತರಿಸಿಕೊಳ್ಳಲು ಸಾಧ್ಯ ಎಂದು ಡಾ. ರಾಯ್ ತಿಳಿಸಿದ್ದಾರೆ.
ಮಿಥ್ಯ 5: ಕಿಡ್ನಿ ಕಾಯಿಲೆಗೆ ಔಷಧಿಗಳೇ ಚಿಕಿತ್ಸೆ; ಇದು ವಯಸ್ಸಾದವರಿಗಷ್ಟೇ ಬರುತ್ತದೆ...
ಕಿಡ್ನಿ ಕಾಯಿಲೆಯ ಚಿಕಿತ್ಸೆಯು ಕೇವಲ ಔಷಧಿಗಳಿಗೆ ಸೀಮಿತವಾಗಿರುವುದಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಆಹಾರದಲ್ಲಿ ಬದಲಾವಣೆ, ನಿಯಮಿತ ವ್ಯಾಯಾಮ, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ, ಧೂಮಪಾನ ತ್ಯಜಿಸುವುದು ಹಾಗೂ ನಿಯಮಿತ ಆರೋಗ್ಯ ತಪಾಸಣೆ ಕೂಡ ಚಿಕಿತ್ಸೆಯ ಭಾಗವಾಗಬಹುದು ಎಂದು ಡಾ. ಕಲ್ರಾ ಹೇಳಿದ್ದಾರೆ.
ಕಿಡ್ನಿ ಕಾಯಿಲೆ ವಯಸ್ಸಾದವರಿಗಷ್ಟೇ ಬರುತ್ತದೆ ಎಂಬ ನಂಬಿಕೆಯೂ ತಪ್ಪು. ಯಾವುದೇ ವಯಸ್ಸಿನ ವ್ಯಕ್ತಿಯಲ್ಲೂ ಸಿಕೆಡಿ ಕಾಣಿಸಿಕೊಳ್ಳಬಹುದು. ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಪದೇಪದೇ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದು, ಕೆಲವು ಕಾಯಿಲೆಗಳು ಹಾಗೂ ಕುಟುಂಬದಲ್ಲಿ ಕಿಡ್ನಿ ಕಾಯಿಲೆಯ ಹಿನ್ನೆಲೆ ಇರುವುದು ಅಪಾಯಕಾರಿ ಅಂಶಗಳಾಗಿವೆ ಎಂದು ಡಾ. ರಾಯ್ ಹೇಳಿದ್ದಾರೆ.
ಹೀಗಾಗಿ ಕಿಡ್ನಿ ಕಾಯಿಲೆ ಪತ್ತೆಯಾದ ತಕ್ಷಣ ಡಯಾಲಿಸಿಸ್ ಬಗ್ಗೆ ಭಯಪಡುವ ಬದಲು, ಕಾಯಿಲೆಯ ನಿಖರ ಕಾರಣ ಮತ್ತು ಹಂತವನ್ನು ತಿಳಿದುಕೊಳ್ಳುವುದು ಮುಖ್ಯ. ಆರಂಭಿಕ ಪತ್ತೆ, ಸೂಕ್ತ ಚಿಕಿತ್ಸೆ, ಆಹಾರ ಕ್ರಮ, ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಹಾಗೂ ನಿಯಮಿತ ವೈದ್ಯಕೀಯ ಮೇಲ್ವಿಚಾರಣೆ ಮೂಲಕ ಹಲವು ಸಂದರ್ಭಗಳಲ್ಲಿ ಕಾಯಿಲೆಯ ಪ್ರಗತಿಯನ್ನು ನಿಧಾನಗೊಳಿಸಲು ಸಾಧ್ಯ. ಯಾವುದೇ ಲಕ್ಷಣಗಳಿಲ್ಲದಿದ್ದರೂ ಅಪಾಯಕಾರಿ ಅಂಶಗಳಿರುವವರು ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ಕಿಡ್ನಿ ಆರೋಗ್ಯ ಕಾಪಾಡುವ ಪ್ರಮುಖ ಹೆಜ್ಜೆಯಾಗಿದೆ.