ಸ್ಟಾಕಹೋಮ್: ಸ್ವೀಡನ್ ದೇಶದ ರಾಜಧಾನಿ ಸ್ಟಾಕಹೋಮ್ನಲ್ಲಿರುವ 'Wenner-Gren Centre'ನಲ್ಲಿ ನವೆಂಬರ್ ಒಂದರಂದು, ಸ್ಟಾಕಹೋಮ್ ಕನ್ನಡ ಕೂಟ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮದಲ್ಲಿ ಸ್ಟಾಕಹೋಮ್ನಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಕುಟುಂಬ, ಮಿತ್ರರೊಂದಿಗೆ ಭಾಗವಯಿಸಿದ್ದರು.
ಎಲ್ಲರೂ ಸೇರಿ ಹಲವಾರು ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ, ಮಕ್ಕಳಿಂದ ರಾಜ್ಯೋತ್ಸವದ ಕಿರು ಪರಿಚಯ ಹಾಗೂ ಸ್ವಾಗತ ನೃತ್ಯ "ಹಚ್ಚೇವು ಕನ್ನಡದ ದೀಪ" ಏರ್ಪಡಿಸಲಾಗಿತ್ತು. ಹಿರಿಯ ಗಣ್ಯರಿಂದ ಲಕ್ಷ್ಮಿ ಪೂಜೆ, ಶ್ರೀ ಸೂಕ್ತ ಪಾರಾಯಣ ಮತ್ತು ಸುಮಂಗಲಿಯರಿಂದ ಲಕ್ಷ್ಮಿ ಅಷ್ಟೋತ್ತರಗಳ ಪೂರ್ವಕ ಪೂಜೆಯನ್ನು ಮಾಡಲಾಯಿತು.
ಮಧ್ಯಾಹ್ನದ ಭೋಜನದ ನಂತರ ಹಲವಾರು ಮನೋರಂಜನಾ ಕಾರ್ಯಕ್ರಮಗಳನ್ನು ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮನೋರಂಜನಾ ಕಾರ್ಯಕ್ರಮಗಳಲ್ಲಿ ಹಿರಿಯರಿಂದ ಹಲವು ಕನ್ನಡ ಚಿತ್ರಗೀತೆಗಳ ಮಿಶ್ರಣಕ್ಕೆ ನೃತ್ಯ, ಮಕ್ಕಳಿಂದ ನಾಟ್ಯ, ಹಿರಿಯ ಮಹಿಳೆಯರಿಂದ ನಾಟ್ಯಗಳು ನಡೆದವು.
ಸ್ಪರ್ಧೆಗಳಲ್ಲಿ ದಂಪತಿಗಳ ಹಾಡಿನ ಸ್ಪರ್ಧೆ, ದೀಪಾವಳಿ-ರಂಗೋಲಿ ಸ್ಪರ್ಧೆ, ಕನ್ನಡ ಇತಿಹಾಸ ಹಾಗೂ ಸಾಂಸ್ಕೃತಿಕ ವಿಷಯಗಳ ರಸಪ್ರಶ್ನೆ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ www.kannadakoota.org ಎಂಬ ವೆಬ್-ಸೈಟನ್ನು ಉದ್ಘಾಟಿಸಲಾಯಿತು.
ಈಗಾಗಲೇ, ಕಳೆದ ಒಂದು ವರ್ಷದಿಂದ ಕನ್ನಡಿಗರೆಲ್ಲರೂ ಸೇರಿ ಸಾಂಸ್ಕೃತಿಕ ಸಮಾರಂಭಗಳನ್ನು ಆಚರಿಸುತ್ತಿದ್ದಾರೆ, ಪ್ರಮುಖವಾಗಿ ಸಂಕ್ರಾಂತಿ ಹಾಗೂ ಗಣರಾಜ್ಯೋತ್ಸವ,ಯುಗಾದಿ, ಗಣೇಶ ಹಬ್ಬ ಹಾಗೂ ಸ್ವಾತಂತ್ರ್ಯದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗು ದೀಪಾವಳಿ ಹಬ್ಬದಾಚರಣೆ.