ಭುಜ್(ಗುಜರಾತ್): ಗುಜರಾತ್‌ನ ಕಛ್ ಜಿಲ್ಲೆಯ ಪ್ರಮುಖ ಪಟ್ಟಣವಾದ 'ಭುಜ್' ನಗರದಲ್ಲಿ ನೆಲೆಸಿರುವ ಉತ್ಸಾಹಿ ಕನ್ನಡಿಗರು 'ಹೊರನಾಡ ಕನ್ನಡಿಗರ ಸೇವಾ ಸಮಿತಿ' ಎಂಬ ಸಂಘಟನೆಯನ್ನು ಮಾಡಿಕೊಂಡು ನಾನಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಅದರಂತೆ ಈ ಬಾರಿಯೂ ಕನ್ನಡ ಬಾಂಧವರೆಲ್ಲಾ ಒಟ್ಟಾಗಿ ಭುಜಿಯಾ ಬೆಟ್ಟದ ತಪ್ಪಲಿನ ಶಿವಮಂದಿರದ ಆವರಣದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಶಾಸ್ತ್ರೋಕ್ತ ರೀತಿಯಲ್ಲಿ ಪೂಜಾದಿಗಳನ್ನು ನೆರವೇರಿಸಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಈ ಬಾರಿಯ ಇನ್ನೊಂದು ವಿಶೇಷವೆಂದರೆ ನೆರೆಯ ನಗರವಾದ ಗಾಂಧಿಧಾಮದ ಆಸಕ್ತ ಕನ್ನಡಿಗರು ಭುಜ್‌ನ ಕನ್ನಡಿಗರೊಂದಿಗೆ ಅಧಿಕ ಸಂಖ್ಯೆಯಲ್ಲಿ ಕಲೆತು ಉ ಉತ್ಸವದ ಯಶಸ್ಸಿಗೆ ಸಹಕರಿಸಿದರು.
ವೈವಿಧ್ಯತೆಯಿಂದ ಕೂಡಿದ್ದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕನ್ನಡದ ಚಿಣ್ಣರಿಗೆ ಚಿತ್ರ ರಚನೆಯನ್ನು ಸ್ಪರ್ಧೆಯನ್ನೂ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು.
ಈ ಹೊರನಾಡಿನ ಕನ್ನಡಿಗರ ಸಂಘಟನೆಯ ಪ್ರಮುಖರಾದ ಟಿ.ವಿ.ಶ್ರೀಧರ್, ಸುಪ್ರಸನ್ನ, ಮಹಾಂತೇಶ್, ಐತಪ್ಪ, ವಿನಯಕುಮಾರ್, ಗವಿಸಿದ್ದಯ್ಯ, ರಾಜು ಕುಲಾಲ್ ಮೊದಲಾದವರ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.