ಹೊರನಾಡು ಕನ್ನಡಿಗ

ಚಿಕಾಗೋ ಕನ್ನಡ ಕೂಟದಲ್ಲಿ ಗಣೇಶೋತ್ಸವ

ಚಿಕಾಗೋ ವಿದ್ಯಾರಣ್ಯ ಕನ್ನಡ ಕೂಟ (ವಿ.ಕೆ.ಕೆ) ೪೨ ವರ್ಷಗಳಿಂದ ನಡೆಸಿಕೊಂಡು ಬಂದಿರುವಂತೆ, ಈ ವರ್ಷವೂ ಸಹ ವಿಜೃಂಭಣೆಯಿಂದ ಗಣೇಶನ ಹಬ್ಬವನ್ನು "ಬೆನಕನಿಗೆ ನಮನ" ಹೆಸರಿನಲ್ಲಿ, ಲೆಮಾಂಟ್ ನಗರದ ರಾಮ ದೇವಸ್ಥಾನದ ಸಭಾಂಗಣದಲ್ಲಿ ಸೆಪ್ಟೆಂಬರ್ ಎರಡನೆ ವಾರದಲ್ಲಿ ಆಚರಿಸಿತು. ಈ ವರ್ಷದ ಬೇಸಿಗೆ ಕಳೆದು ಶರದೃತು ತನ್ನ ಆಗಮನದ ಮುನ್ಸೂಚನೆ ಆಗಲೆ ನೀಡಿತ್ತು. ತುಸು ಚಳಿ ವಾತಾವರಣದ ಮಧ್ಯೆ ಸುಮಾರು ೫೫೦ಕ್ಕೂ ಹೆಚ್ಚು ಕನ್ನಡಿಗರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಭೇಟಿ-ಕುಶಲೋಪಚಾರ, ಕಾಫಿ/ಟೀ, ಶ್ರೀರಾಮ ದೇವಾಸ್ಥಾನದ ಪಾಕಶಾಲೆಯಲ್ಲೆ ತಯಾರಾದ ರುಚಿಕರವಾದ ತಿಂಡಿಯ ನಂತರ ಎಲ್ಲರೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸಮರತಿ ಸಭಾಂಗಣಕ್ಕೆ ಆಗಮಿಸಿದರು. ಮೊದಲನೆಯದಾಗಿ ದೇವಸ್ಥಾನದ ಅರ್ಚಕರು ಸಾಂಪ್ರದಾಯಿಕವಾಗಿ ಗಣೇಶನ ಪೂಜೆ ನಡೆಸಿಕೊಟ್ಟರು.

ಈ ಬಾರಿಯ ಗಣೇಶನ ಹಬ್ಬದ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ನಿವೃತ್ತ ಪೋಲಿಸ್ ಅಧಿಕಾರಿ ರವೀಂದ್ರನಾಥ ಠಾಗೋರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ವಿ.ಕೆ.ಕೆ ಅಧ್ಯಕ್ಷರಾದ ಶ್ರೀಶ ಜಯಸೀತಾರಾಮ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಜರಿದ್ದರು.

ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಪ್ರಾರ್ಥನೆ, ಅಮೆರಿಕ, ಭಾರತೀಯ ರಾಷ್ಟ್ರಗೀತೆ ಮತ್ತು ಕರ್ನಾಟಕದ ನಾಡಗೀತೆಗಳೊಂದಿಗೆ ಆರಂಭವಾಯಿತು. ನಂತರ ಅಧ್ಯಕ್ಷರಾದ ಶ್ರೀಶ ಜಯಸೀತಾರಾಮ್ ತಮ್ಮ ಸಹಜ ಹಾಸ್ಯ ಲೇಪಿಸಿದ ಶೈಲಿಯಲ್ಲಿ ಸ್ವಾಗತ ಭಾಷಣ ಮಾಡಿದರು.

ಇದಾದ ನಂತರ ಕೂಟದ ಕಿರಿಯ ಸದಸ್ಯರು ಉಷಾ ಕೊಲ್ಪೆ ಅವರ ನಿರ್ದೇಶನದಲ್ಲಿ ಭಕ್ತಿಪ್ರಧಾನವಾದ 'ಪರಮ ಭಕ್ತ' ಎಂಬ ಕಿರು ನಾಟಕವನ್ನು ನಡೆಸಿಕೊಟ್ಟರು. ಶಾರದಾ ಬೈಯ್ಯಣ್ಣನವರ ನೇತೃತ್ವದಲ್ಲಿ ಕೂಟದ ಸದಸ್ಯರು ಸಂದರ್ಭೋಚಿತವಾಗಿ ಜನಪ್ರಿಯ ಗಣಪನ ಪ್ರಾರ್ಥನಾ ಗೀತೆ 'ಗಜಮುಖನೆ ಗಣಪತಿಯೆ' ಸೊಗಸಾಗಿ ಹಾಡಿದರು. ತದ ನಂತರ ಜಯಂತ್ ಪುಟ್ಟಪ್ಪನವರ ನಿರ್ದೇಶನದಲ್ಲಿ ಕಿರಿಯ ಸದಸ್ಯರುಗಳು ಸಂಗೀತಮಯ ಕಿರುನಾಟಕ 'ಗಣೇಶ ಅವತಾರ' ಪ್ರದರ್ಶಿಸಿದರು. ಅದಾದ ಮೇಲೆ ಗಣೇಶನ ಕಥೆಯನ್ನು ಆದರಿಸಿದ ಮತ್ತೊಂದು ಕಿರಿಯ ನಾಟಕ ಸುನಿತಾ ಬೇಲೂರ್ ಮತ್ತು ರೂಪಶ್ರೀ ಭಟ್ಟ ಅವರ ನಿರ್ದೇಶನದಲ್ಲಿ  'ಗಣೇಶ ಬಂದ' ಬಹಳ ಉತ್ತಮವಾಗಿ ಮೂಡಿ ಬಂದಿತು.

ಈ ಸಾರಿಯ ಕಾರ್ಯಕ್ರಮದಲ್ಲಿ ಒಂದು ವಿಶೇಷ ಸ್ಪರ್ಧೆ, ಪ್ಲೇ ಡೊ ಮತ್ತು ಲೆಗೊ ಅಚ್ಚುಗಳಿಂದ ಗಣೇಶನನ್ನು ನಿರ್ಮಿಸುವ ಸ್ಪರ್ಧೆ. ಉತ್ತಮ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾದ ನಂತರ, ಕೂಟದ ಸದಸ್ಯರ ಕಾರ್ಯಕ್ರಮಗಳು ಆಶಾ ಅಡಿಗರ ನಾಟ್ಯ ನಿರ್ದೇಶನದ ವಿಶೇಷ ರಂಗ ಸಜ್ಜಿಕೆಗಳೊಂದಿಗೆ ಅತ್ಯಾಕರ್ಷಕವಾಗಿ ಎಲ್ಲರ ಮನ ಸೆಳೆದ  'ನಮ್ದೊಂಥರಾ ಹಾಡು' ಎಂಬ ನಾಟ್ಯ ಮತ್ತು ಹಾಡಿನ ಕಾರ್ಯಕ್ರಮದೊಂದಿಗೆ ಮುಕ್ತಾಯವಾಯಿತು.

ಈ ಸಂದರ್ಭದಲ್ಲಿ ವಿಶೇಷ ಅತಿಥಿ ಕೆ. ವಿ. ರವೀಂದ್ರನಾಥ ಠಾಗೋರ್ ಅವರು ಎಲ್ಲರ ಮನ ಸೆಳೆಯುವಂತೆ ಸಂದೇಶಭರಿತವಾದ ಭಾಷಣವನ್ನು ಮಾಡಿದರು. ಅವರ ಭಾಷಣದಲ್ಲಿ ಕರ್ನಾಟಕದ ಹಿರಿಮೆ, ಅನಿವಾಸಿ ಕನ್ನಡಿಗರ ಮಕ್ಕಳಲ್ಲಿ ಕನ್ನಡ ಭಾಷೆ, ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವಲ್ಲಿ ಕನ್ನಡ ಕೂಟಗಳ ಪಾತ್ರ, ಅನಿವಾಸಿ ತಂದೆ ತಾಯಿಗಳು ತಮ್ಮ ಮಕ್ಕಳ ಜೊತೆ ಕನ್ನಡದಲ್ಲೇ ಮಾತನಾಡಬೇಕಾದ ಕಾರಣ ಮತ್ತು ಮಹತ್ವ, ಬಹು ಮುಖ್ಯವಾದ ಅಂಶಗಳು. ಅವರು ನೆರೆದ ಅನಿವಾಸಿ ಕನ್ನಡಿಗರಿಗೆ ಕರ್ನಾಟಕದ ಪ್ರವಾಸಿ ಸ್ಥಳಗಳ ವಿವರಣೆಗಳೊಂದಿಗೆ, ಆ ಸ್ಥಳಗಳಿಗೆ ಭೇಟಿ ನೀಡಲು ಪ್ರೋತ್ಸಾಹಿಸಿದರು.

ನಂತರ ಕರ್ನಾಟಕದಿಂದ ಬಂದ ಅತಿಥಿ ಕಲಾವಿದರಿಂದ ಎರಡು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬಂದವು. ಮೊದಲ ವಿಶೇಷ ಕಾರ್ಯಕ್ರಮ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿರುವ ಮಂಗಳೂರಿನ ಕುಮಾರಿ ಬಿ. ಎಚ್. ತನ್ವಿ ರಾವ್ ಅವರಿಂದ "ನೃತ್ಯ ಸಮ್ಮಿಲನ". ಎರಡನೆಯ ವಿಶೇಷ ಕಾರ್ಯಕ್ರಮ ಧಾರವಾಡದಿಂದ ಬಂದ ಸಿತಾರ್ ವಿದ್ವಾಂಸರಾದ ಉಸ್ತಾದ್ ರಯಿಸ್ ಬಾಲೆ ಖಾನ್ ಮತ್ತು ಉಸ್ತಾದ್ ಹಫೀಸ್ ಬಾಲೆ  ಖಾನ್ ಅವರಿಂದ "ಸಿತಾರ್ ಸಂಗೀತ ಸುಧೆ" ಜುಗಲ್ಬಂಧಿ.

ಕುಮಾರಿ ತನ್ವಿ ರಾವ್ ಅವರು ತಮ್ಮ "ನೃತ್ಯ ಸಮ್ಮಿಲನ" ಕಾರ್ಯಕ್ರಮವನ್ನು ಎರಡು ಭಾಗಗಳಲ್ಲಿ ಪ್ರಸ್ತುತ ಪಡಿಸಿದರು. ಪ್ರಥಮ ಭಾಗದಲ್ಲಿ ಸಾಂಪ್ರದಾಯಿಕ ಭರತ ನಾಟ್ಯವನ್ನೂ, ಎರಡನೆ ಭಾಗದಲ್ಲಿ ಲಘು ಶಾಸ್ತ್ರೀಯ ಹಾಡುಗಳಿಗೆ ಹಾಗೂ ಕೆಲವು ಜನಪ್ರಿಯ ಸಿನೆಮಾ ಹಾಡುಗಳಿಗೆ ನರ್ತಿಸಿ ಪ್ರೇಕ್ಷಕರನ್ನು ರಂಜಿಸಿದರು.

ಎರಡನೆಯ ಭಾಗದಲ್ಲಿ, ಕುಮಾರಿ ತನ್ವಿ ರಾವ್ ಅವರು ಆಯ್ಕೆ ಮಾಡಿಕೊಂಡ ಹಾಡುಗಳು, "ಓಂಕಾರ ಅಭಿನಯ ವೇದ", "ಕೃಷ್ಣಾ ನೀ ಬೇಗನೆ ಬಾರೊ", ೪೦ ವರ್ಷ ಹಳೆಯದಾದ 'ಸತ್ಯ ಹರಿಶ್ಚಂದ್ರ' ಕನ್ನಡ ಚಿತ್ರದ ಹಾಡು "ನನ್ನ ನೀನು, ನಿನ್ನ ನಾನು", ಮತ್ತು ವಿವೇಕಾನಂದರ ನೆನಪು ತರಿಸುವ 'ಉಪಾಸನೆ' ಚಿತ್ರದ "ಭಾರತ ಭೂಶಿರ ಮಂದಿರ ಸುಂದರಿ". ಎಲ್ಲ ನೃತ್ಯಗಳು ಬಹಳ ಉತ್ತಮವಾಗಿ ಮೂಡಿಬಂದು ಎಲ್ಲರ ಮನಸೆಳೆದವು. "ಕೃಷ್ಣಾ ನೀ ಬೇಗನೆ ಬಾರೊ" ಹಾಡಿನ ನರ್ತನದಲ್ಲಿ ಅವರ ಕಣ್ಣಿಂದ ಬಂದ ನೀರಿನ ಹನಿ, ತನ್ವಿ ಅವರ ನಾಟ್ಯ ಕಲೆಯ ಮೇಲಿನ ನಿಷ್ಠಾ ಪೂರ್ಣತೆಗೆ ಒಂದು ಸಾಕ್ಷಿಯಾಗಿ ಎಲ್ಲರ ಪ್ರಶಂಸೆಯ ಮಾತಿನ ವಸ್ತುವಾಗಿತ್ತು.

ಇನ್ನು ಎರಡನೆಯ ವಿಶೇಷ ಕಾರ್ಯಕ್ರಮ ಸಿತಾರ್ ಸಂಗೀತ ಸುಧೆ. ಈ ಒಂದು ಹಿಂದುಸ್ತಾನಿ ಶೈಲಿಯ ಕಾರ್ಯಕ್ರಮ ಆರಂಭವಾದದ್ದು  ರಾಗ ಜನ ಸಮ್ಮೋಹಿನಿಯಲ್ಲಿ ಆಲಾಪ್, ಜೋದ್, ಜ಼ಲ ಮತ್ತು  "ತೀನ್ ತಾಳ" ದಲ್ಲಿ ಒಂದು ಬಂದಿಶ್. ಸಿತಾರ್ ವಾದನದಲ್ಲಿ ಖಾನ್ ಸಹೋದರರ ಕೈಚಳಕ, ಮತ್ತು ಹಾಡುಗಾರಿಕೆಯಲ್ಲಿ ಅವರ ಕಂಠ ಮಾಧುರ್ಯ, ಪ್ರೇಕ್ಷಕರಿಗೆ ರಸದೌತಣ ನೀಡಿದವು. ಆ ನಂತರ ಖಾನ್ ಸಹೋದರರು ಕನಕ ದಾಸರ ಕೃತಿ "ಜೀವಿಸಬಹುದೆ" ಮತ್ತು ಕೂಡಲ ಚೆನ್ನ ಬಸವಣ್ಣನವರ ಕೃತಿ "ನುಡಿದರೆ ಗುರುವಾಗಿ" ಬಹಳ ಇಂಪಾಗಿ ಹಾಡಿದರು. ಈ ಹಾಡುಗಳನ್ನ ಕೇಳಿದ ಪ್ರೇಕ್ಷಕರು ನಿಂತು ಚಪ್ಪಾಳಿ ತಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು, ಆದರೆ ಯಾರಿಗೂ ತೃಪ್ತಿ ಆಗಿರಲಿಲ್ಲ. ಖಾನ್ ಸಹೋದರರು ಇನ್ನೂ ಹಾಡಲೇಬೇಕೆಂಬ ಒತ್ತಾಯದ ಮೇರೆಗೆ ಡಾ|| ಭೀಮ್ ಸೇನ್ ಜೋಶಿಯವರ ಶೈಲಿಯಲ್ಲಿ ಪುರಂದರ ದಾಸರ ಭಕ್ತಿ ಗೀತೆ "ಭಾಗ್ಯಾದ ಲಕ್ಷ್ಮಿ ಬಾರಮ್ಮ" ಹಾಡಿ ಎಲ್ಲರ ಮನ ಸೂರೆಗೊಂಡರು. ಪ್ರೇಕ್ಷಕರು ಎರಡು ಬಾರಿ ಎದ್ದು ನಿಂತು ಚಪ್ಪಾಳಿ ತಟ್ಟಿದ್ದು ಬಾಲೆ ಖಾನ್ ಸಹೋದರರ ಸಿತಾರ್ ಕಾರ್ಯಕ್ರಮಕ್ಕೆ ಮೆಚ್ಚುಗೆಯ ಸಾಕ್ಷಿಯಾಗಿತ್ತು.

ವಿ.ಕೆ.ಕೆ. ಖಜಾಂಚಿಯವರಾದ ಶಬಿತಾ ರಾಜ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸಾಂಸ್ಕೃತಿಕ ಸಮಿತಿಯ ಮುರಲೀಧರ ಕಜೆ ಹಾಗೂ ನೀತಾ ಧನಂಜಯ ಅವರು ನಡೆಸಿಕೊಟ್ಟರು.

ವರದಿ - ಮಂಜುನಾಥ ಕುಣಿಗಲ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT