ರಾಜ್ಯ

ಸಿದ್ದಗಂಗಾ ಶ್ರೀಗಳು ಜನಿಸಿದ್ದು 2008ರಲ್ಲಿ: ಮುಖ್ಯಮಂತ್ರಿಯಿಂದ ಆದ ಪ್ರಮಾದ

Sumana Upadhyaya

ತುಮಕೂರು: ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಹುಟ್ಟುಹಬ್ಬಕ್ಕೆ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ಗಣ್ಯರೆಲ್ಲ ನಿನ್ನೆ ಶುಭ ಕೋರಿದ್ದರು.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಶ್ರೀಗಳಿಗೆ ಶುಭಾಶಯ ಕೋರಲು ಹೋಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀಗಳು 2008ರಲ್ಲಿ ಹುಟ್ಟಿದ್ದು ಎಂದು ಹೇಳಿ ಮುಜುಗರಕ್ಕೊಳಗಾದರು.

ಆಗಿದ್ದಿಷ್ಟು: ನಿನ್ನೆ ಶಿವಕುಮಾರ ಸ್ವಾಮೀಜಿಗೆ ಶುಭಾಶಯ ತಿಳಿಸಿ ಅವರ ಕ್ಷೇಮ ಸಮಾಚಾರ ವಿಚಾರಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊರಗೆ ಸುದ್ದಿಗಾರರು ಮಾತನಾಡಿಸಿದರು. ಆಗ ಪ್ರಮಾದದಿಂದ ಸಿದ್ದರಾಮಯ್ಯನವರು 2008ರಲ್ಲಿ ಜನಿಸಿದ ಶ್ರೀಗಳು ಎಂದು ಹೇಳಿದರು, ನಂತರ ತಿದ್ದಿಕೊಂಡರು ಕೂಡ. ಇನ್ನು ಲೋಕಾಯುಕ್ತದಲ್ಲಿ 18 ಸಾವಿರ ಕೇಸುಗಳು ಇತ್ಯರ್ಥವಾಗದೆ ಬಾಕಿ ಉಳಿದಿದೆ ಎಂದು ಹೇಳುವ ಬದಲಿಗೆ ಸಾವಿರದ 800 ಕೇಸುಗಳು ಎಂದುಬಿಟ್ಟರು. ಅದನ್ನು ಕೂಡ ತಿದ್ದಿಕೊಂಡರು.

ಮುಖ್ಯಮಂತ್ರಿಗಳ ಜೊತೆ ಅವರ ಸಹೋದ್ಯೋಗಿಗಳಾದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಗಣಿ ಖಾತೆ ಸಚಿವ ಎನ್.ಬಿ.ನ್ಯಾಮ್ ಗೌಡ ಕೂಡ 109ನೇ ವಸಂತಕ್ಕೆ ಕಾಲಿಟ್ಟ ಸ್ವಾಮೀಜಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಕೆಲವು ಭಕ್ತರು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ವಿರುದ್ಧ ಆರೋಪಿಸಿ, ಇಲಾಖೆಯಲ್ಲಿ ಬೆಡ್ ಮತ್ತು ತಲೆದಿಂಬು ಕವರ್ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದರು.ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ಸ್ವಾಮೀಜಿಯವರಿಗೆ ಟ್ವಿಟ್ಟರ್ ನಲ್ಲಿ ಶುಭಾಶಯ ಹಂಚಿಕೊಂಡಿದ್ದ ಪ್ರಧಾನಿ, ಪೂಜ್ಯ ಸ್ವಾಮೀಜಿಯವರಿಗೆ ಪ್ರಣಾಮಗಳು, ಅವರ ಅದ್ವಿತೀಯ ಸೇವೆ ಮತ್ತು ಶ್ರೇಷ್ಠ ಕೆಲಸಗಳು ಹಲವರ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದರು.

SCROLL FOR NEXT