ಬೆಂಗಳೂರು: ಸರ್ಕಾರದ ಉದ್ಯೋಗದಲ್ಲಿ ಬಡ್ತಿ ಮತ್ತು ಇತರೆ ಹಣಕಾಸು ಸೌಲಭ್ಯವನ್ನು ಪಡೆಯಲು ಕರ್ನಾಟಕ ಅಗ್ನಿ ಶಾಮಕ ಮತ್ತು ತುರ್ತು ಸೇವೆ ಇಲಾಖೆಯಲ್ಲಿನ ಅಧಿಕಾರಿಗಳು ನಕಲಿ ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ ಅಗ್ನಿ ಶಾಮಕ ಮತ್ತು ತುರ್ತು ಸೇವೆ ಇಲಾಕೆಯಲ್ಲಿ 12 ಅಧಿಕಾರಿಗಳು ಬಡ್ತಿ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ನಕಲಿ ಪ್ರಮಾಣ ಪತ್ರಗಳನ್ನು ನೀಡಿದ್ದಾರೆಂದು ಕರ್ನಾಟಕ ಅಗ್ನಿ ಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಉಪ ನಿರ್ದೇಶಕ(ಕಾರ್ಯನಿರ್ವಹಣೆ) ಎಚ್ ಎಸ್ ವರದರಾಜನ್ ಅವರು ಭಾರತೀನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಓರ್ವ ಅಗ್ನಿ ಶಾಮಕ ಅಧಿಕಾರಿ, ಓರ್ವ ಎಫ್ ಡಿಎ ಹಾಗೂ 10 ಸಹಾಯಕ ಅಗ್ನಿ ಶಾಮಕ ಅಧಿಕಾರಿಗಳು ನಕಲಿ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ ಎಂದು ವರದರಾಜನ್ ದೂರು ದಾಖಲಿಸಿದ್ದಾರೆ.
ಈ ಎಲ್ಲಾ ಅಧಿಕಾರಿಗಳು ಬಡ್ತಿ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಎಸ್ ಎಸ್ ಎಲ್ ಸಿ ಅಂಕಪಟ್ಟಿ ಸೇರಿದಂತೆ ಇತರೆ ನಕಲಿ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ. ಇದರಿಂದ ಇಲಾಖೆಯಲ್ಲಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ವರದರಾಜನ್ ಹೇಳಿದ್ದಾರೆ.
ಮಾರ್ಚ್ 31ರಂದು XXVIII ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ ವೆಂಕಟೇಶ್ ಅವರು ಪ್ರಕರಣ ಎಲ್ಲಾ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರು. ಈ 12 ಅಧಿಕಾರಿಗಳು ಆರೋಪವನ್ನು ತಳ್ಳಿ ಹಾಕಿದ್ದು, ನಾವು ನೀಡಿರುವ ಮೂಲ ದಾಖಲೆಗಳನ್ನು ನೀಡಿದ್ದೇವೆ. ಆದರೆ, ಅದನ್ನು ಯಾರೋ ಬದಲಾಯಿಸಿದ್ದಾರೆ ಎಂದು ಹೇಳಿದ್ದಾರೆ.