ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರ ಪಾಲುದಾರಿಕೆಯ ಮ್ಯಾಟ್ರಿಕ್ಸ್ ಇಮೇಜಿಂಗ್ ಸೆಲ್ಯೂಷನ್ಸ್ ಇಂಡಿಯಾ ಪ್ರೈ.ಲಿ. ಸಂಸ್ಥೆಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿನ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯ (ಪಿಎಂಎಸ್ ಎಸ್ ವೈ) ಆಸ್ಪತ್ರೆಯಲ್ಲಿ ಖಾಸಗಿ ಲ್ಯಾಬ್ ತೆರೆಯಲು ನೀಡಿರುವ ಟೆಂಡರ್ ನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ದುಬಾರಿ ವಾಚ್ ಪ್ರಕರಣ ವಿವಾದದ ಬೆನ್ನಲ್ಲೆ, ಪುತ್ರನ ಕಂಪನಿಗೆ ಲ್ಯಾಬ್ ಟೆಂಡರ್ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪುತ್ರ ವ್ಯಾಮೋಹದ ಆರೋಪ ಕೇಳಿಬಂದಿದೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿಗಳು ಪ್ರಯೋಗಾಲಯ ತೆರೆಯಲು ನೀಡಿರುವ ಗುತ್ತಿಗೆಯನ್ನು ರದ್ದು ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ಸ್ ಕಚೇರಿ ಹೊಂದಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಲ್ಯಾಬ್ ಆರಂಭಿಸಲು ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಸಿಎಂ ಹಾಗೂ ಸಚಿವ ಸಂಪುಟದ ಸದಸ್ಯರ ಕುಟುಂಬ ಸರ್ಕಾರದೊಂದಿಗೆ ಯಾವುದೇ ಉದ್ಯಮದಲ್ಲಿ ಪಾಲ್ಗೊಳ್ಳುವುದಾಗಲಿ ಅಥವಾ ಸರ್ಕಾರಕ್ಕೆ ಯಾವುದೇ ಸೇವೆ ಒದಗಿಸುವಂತಿಲ್ಲ ಎಂಬ ನೀತಿ ಸಂಹಿತೆ ಇದೆ.
ಆದರೆ ನಿಯಮ ಮೀರಿ ಸಿಎಂ ಪುತ್ರನ ಸಂಸ್ಥೆಗೆ ಡಯಾಗ್ನೋಸ್ಟಿಕ್ ಘಟಕ ತೆರೆಯಲು ಅನುಮತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಪುತ್ರ ಯತೀಂದ್ರ ಅವರು ಕಂಪನಿಯ ನಿರ್ದೇಶಕ ಸ್ಥಾನಕ್ಕೆ ನಿನ್ನೆ ರಾಜಿನಾಮೆ ನೀಡಿದ್ದರು.