ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಉಪನ್ಯಾಸಕರ ಸಂಘದ ನಡುವಿನ ಸಂಘರ್ಷ ಶನಿವಾರ ಕೂಡ ಮುಂದುವರಿದಿದೆ. ಕೋಡಿಂಗ್ ಮತ್ತು ಡಿಕೋಡಿಂಗ್ ಕೆಲಸ ನಿನ್ನೆ ಅಪರಾಹ್ನದಿಂದ ಆರಂಭಗೊಂಡಿದೆ ಎಂದು ಇಲಾಖೆ ಹೇಳುತ್ತಿದೆ. ಉತ್ತರ ಪತ್ರಿಕೆಗಳನ್ನು ಇರಿಸಿರುವ ಲಾಕರ್ ನ ಕೀ ನಮ್ಮ ಬಳಿ ಇದೆ.ಹಾಗಿರುವಾಗ ಅವರು ಕೋಡಿಂಗ್ ಮತ್ತು ಡಿಕೋಡಿಂಗ್ ಹೇಗೆ ಮಾಡುತ್ತಾರೆ ಎಂದು ಉಪನ್ಯಾಸಕರು ಕೇಳುತ್ತಾರೆ.
ಕೋಡಿಂಗ್ ಮತ್ತು ಡಿಕೋಡಿಂಗ್ ಕೆಲಸ ಪ್ರಾರಂಭಿಸಿದ್ದೇವೆ ಎಂದು ಹೇಳಿ ಸರ್ಕಾರ ನಮಗೆ ಬೆದರಿಕೆಯೊಡ್ಡಲು ಪ್ರಯತ್ನಿಸುತ್ತಿದೆ. ಕೋಡಿಂಗ್ ಮತ್ತು ಡಿಕೋಡಿಂಗ್ ಮಾಡಿ ಮೌಲ್ಯಮಾಪನ ನಡೆಸಲು ಸಾಧ್ಯವಿಲ್ಲ. ಇಲಾಖೆಗೆ 3 ಸಾವಿರ ಮಂದಿ ಪ್ರಾಂಶುಪಾಲರು ಮತ್ತು ಹಿರಿಯ ಬೋಧಕರ ಅವಶ್ಯಕತೆಯಿದೆ. ಆದರೆ ಅವರ ಬಳಿ ಕೇವಲ 400 ಮಂದಿ ಹಿರಿಯ ಬೋಧಕರಿದ್ದಾರೆ. ಹೀಗಿರುವಾಗ ಸಮಯಕ್ಕೆ ಸರಿಯಾಗಿ ಮೌಲ್ಯಮಾಪನ ಮುಗಿಸಲು ಹೇಗೆ ಸಾಧ್ಯ ಎಂದು ಕೇಳುತ್ತಾರೆ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇಲಾಖೆ ಪ್ರಭಾರ ನಿರ್ದೇಶಕ ಡಾ.ರಾಮೇಗೌಡ, ಮೌಲ್ಯಮಾಪನಕ್ಕೆ ನಾವು ಅನುಭವಿ ಬೋಧಕರನ್ನು ಬಳಸಿಕೊಳ್ಳುತ್ತಿದ್ದೇವೆ. ಮತ್ತು ಡಿಎಸ್ ಇಆರ್ ಟಿ, ಕೋಡಿಂಗ್ ಮತ್ತು ಡಿಕೋಡಿಂಗ್ ಕೆಲಸವನ್ನು ಮಾಡಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಗಾಬರಿಪಡಬೇಕಾಗಿಲ್ಲ. ಫಲಿತಾಂಶವನ್ನು ಸಮಯಕ್ಕೆ ಸರಿಯಾಗಿ ಪ್ರಕಟಿಸುತ್ತೇವೆ ಎಂದು ಹೇಳಿದರು.
ಮೌಲ್ಯಮಾಪನ ಆದೇಶ ಪರಿಶೀಲನೆ: ಸಿಐಡಿ ದಾಳಿ ನಡೆಸಿದ್ದ ಕೆಲವು ಖಾಸಗಿ ಕಾಲೇಜುಗಳ ಉಪನ್ಯಾಸಕರಿಗೆ ಪಿಯು ಶಿಕ್ಷಣ ಇಲಾಖೆ ಮೌಲ್ಯಮಾಪನ ಆದೇಶ ಹೊರಡಿಸಿದೆ. ಅದರ ಪ್ರತಿ ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಮೇಗೌಡ, ಸಿಐಡಿ ದಾಳಿಗೂ ಮುನ್ನ ಆದೇಶ ನೀಡಲಾಗಿತ್ತು. ನಾವು ಸಿಐಡಿ ಜೊತೆ ಕ್ರಾಸ್ ಚೆಕ್ ಮಾಡಿ ಆದೇಶವನ್ನು ಹಿಂಪಡೆಯುತ್ತೇವೆ ಎಂದಿದ್ದಾರೆ.
ಮುಖ್ಯ ಪರೀಕ್ಷಾಧಿಕಾರಿ ರಾಜೀನಾಮೆ: ಈ ಮಧ್ಯೆ ಮಂಗಳೂರಿನ ಮೌಲ್ಯಮಾಪನ ಕೇಂದ್ರದ ಮುಖ್ಯ ಪರೀಕ್ಷಕ ರಾಧಾಕೃಷ್ಣ ರಾವ್, ತಮ್ಮ ಮೇಲೆ ಇಲಾಖೆ ಹೇರುತ್ತಿರುವ ಒತ್ತಡವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪದವಿಪೂರ್ವ ಇಲಾಖೆಗೆ ಅಧಿಕೃತ ಪತ್ರ ಕಳುಹಿಸಿರುವ ಅವರು, ಮೌಲ್ಯಮಾಪನ ಕೆಲಸ ಮಾಡಲು ನನಗೆ ಇಲಾಖೆಯ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಅನುಭವವಿಲ್ಲದ ಉಪನ್ಯಾಸಕರಿಂದ ಮೌಲ್ಯಮಾಪನ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಕೋಡಿಂಗ್ ಮತ್ತು ಡಿಕೋಡಿಂಗ್: ಮೌಲ್ಯಮಾಪನದ ಮೊದಲ ಹಂತವಾಗಿದ್ದು, ಅಲ್ಲಿ ಹಿರಿಯ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ವಿದ್ಯಾರ್ಥಿ ಕೋಡ್, ಕಾಲೇಜು ಕೋಡ್ ಮತ್ತು ಜಿಲ್ಲಾ ಕೋಡ್ ನ್ನು ನೀಡುವ ಮೂಲಕ ಉತ್ತರ ಪತ್ರಿಕೆಗಳನ್ನು ಪ್ರತ್ಯೇಕಿಸುತ್ತಾರೆ. ನಂತರ ಪ್ರತಿ ಮೌಲ್ಯಮಾಪಕರಿಗೆ 24 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ನೀಡಲಾಗುತ್ತದೆ.
ಪರ್ಯಾಯ ಮಾರ್ಗ: ಸರ್ಕಾರಿ ಉಪನ್ಯಾಸಕರು ತಮ್ಮ ಮುಷ್ಕರ ಹಿಂತೆಗೆದುಕೊಳ್ಳದಿದ್ದರೆ ಅವರಿಗೆ ಶೋಕಾಸ್ ನೊಟೀಸ್ ನೀಡಲಾಗುವುದು. ಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪರ್ಯಾಯ ವ್ಯವಸ್ಥೆಯನ್ನು ಇಂದು ಘೋಷಿಸುವ ಸಾಧ್ಯತೆಯಿದೆ.
ಕ್ಷಮಾದ ಯು-ಟರ್ನ್: ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದ ಕರ್ನಾಟಕ ರಾಜ್ಯ ಸಹಾಯಕ ಶಿಕ್ಷಕರ ಸಂಘದ ಸದಸ್ಯರು ಇದೀಗ ಉಲ್ಟಾ ಹೊಡೆದಿದ್ದಾರೆ. ಸಂಘದೊಳಗೆ ಭಿನ್ನಾಭಿಪ್ರಾಯವಿರುವುದರಿಂದ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡದಿರಲು ನಿರ್ಧರಿಸಿದ್ದಾರೆ. ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಏಪ್ರಿಲ್ 18ರಂದು ಆರಂಭವಾಗಬೇಕಿತ್ತು.