ಬಾಗಲಕೋಟೆ: ರಾಜ್ಯದ ಬರಪೀಡಿತ ಗ್ರಾಮಗಳ ಪ್ರವಾಸ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಅವರ ಬರ ಪ್ರವಾಸಕ್ಕೆ ವ್ಯಾಪಕ ಖಂಡನೆ ವ್ಯಾಕ್ತವಾಗುತ್ತಿದ್ದು, ಕುಡಿಯುವುದಕ್ಕೇ ನೀರಿಲ್ಲದ ಗ್ರಾಮದಲ್ಲಿ ಸಿದ್ದರಾಮಯ್ಯ ಆಗಮಿಸುತ್ತಾರೆ ಎಂದು ಹೇಳಿ ಬರೊಬ್ಬರಿ 2 ಟ್ಯಾಂಕರ್ ನೀರನ್ನು ರಸ್ತೆಗೆ ಮೇಲೆ ಹಾಕಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಸೋಮವಾರ ಬಾಗಲಕೋಟೆ ಬರ ಪೀಡಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿನ ಧೂಳು ಸಹಿತ ರಸ್ತೆಗಳಿಗೆ ಅಧಿಕಾರಿಗಳು ನೀರು ಹಾಕಿಸುವ ಮೂಲಕ ರಸ್ತೆಯಲ್ಲಿ ಧೂಳು ಏಳದಂತೆ ಮಾಡಿದ್ದಾರೆ. ಬೀಳಗಿ ಪಟ್ಟಣದಲ್ಲಿ ಕನಕದಾಸ ಪುತ್ಥಳಿಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಲು ಆಗಮಿಸುತ್ತಾರೆ ಎನ್ನುವ ವಿಚಾರ ತಿಳಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಲ್ಲಿನ ರಸ್ತೆಗೆ ಮತ್ತು ಅದರ ಸುತ್ತಮುತ್ತಲಿನ ರಸ್ತೆಗೆ 2 ಟ್ಯಾಂಕರ್ ಗಳ ಮೂಲಕ ನೀರು ಹಾಕಿದ್ದು ವಿವಾದ ಸೃಷ್ಟಿಸಿದೆ.
ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದು, ಜನ ಕುಡಿಯಲು ನೀರು ದೊರೆಯದೆ ತತ್ತರಿಸುತ್ತಿದ್ದರೆ ಇತ್ತ ಅಧಿಕಾರಿಗಳು ಮತ್ತು ಪಂಚಾಯಿತಿ ಸದಸ್ಯರು ಮಾತ್ರ ಈ ರೀತಿ ರಸ್ತೆಗೆ ನೀರು ಸುರಿದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಆದರೆ ಮಾಧ್ಯಮ ಮಿತ್ರರು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಕೇಳಿದಾಗ ಈ ಬಗ್ಗೆ ನನಗೇನೂ ಗೊತ್ತಿಲ್ಲ, ಎಲ್ಲ ಡಿಸಿ ನೋಡಿಕೊಳ್ಳುತ್ತಾರೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ.
ಸಿಎಂ ವಿರುದ್ಧ ರೈತರ ಆಕ್ರೋಶ
ಇದೇ ವೇಳೆ ಬರ ಪ್ರವಾಸ ನಿರತ ಸಿಎಂ ರೈತರ ಆಕ್ರೋಶಕ್ಕೂ ಕಾರಣರಾದರು. ಬರ ಪ್ರವಾಸದುದ್ದಕ್ಕೂ ಕೇವಲ ಅಧಿಕಾರಿಗಳಿಂದ ಮಾತ್ರ ಸಿಎಂ ಮಾಹಿತಿ ಪಡೆಯುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯ ರೈತರು ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡು ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅವರ ಮಾಹಿತಿಗಿಂತಲೂ ಪರಿಸ್ಥಿತಿ ಭೀಕರವಾಗಿದೆ ಎಂದು ಹೇಳಿದರು.