ರಾಜ್ಯ

ಮೈಸೂರು: ಸಾಮೂಹಿಕ ಗೋಮಾಂಸ ಭಕ್ಷಣೆ ತಡೆದ ಪೊಲೀಸರು

Shilpa D

ಮೈಸೂರು : ಗುಜರಾತ್‌ನಲ್ಲಿ ದಲಿತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ದಲಿತ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಮೈಸೂರಿನ ಪುರಭವನದ ಆವರಣದಲ್ಲಿ ಸಾಮೂಹಿಕ ಗೋಮಾಂಸ ಭಕ್ಷಣೆ  ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಪ್ರತಿಭಟನೆಗಷ್ಟೇ ಅವಕಾಶ ಮಾಡಿಕೊಟ್ಟ ಪೊಲೀಸರು ಗೋಮಾಂಸ ಹಂಚಿಕೆ ಮತ್ತು ಸೇವಿಸುವುದಕ್ಕೆ ತಡೆಯೊಡ್ಡಿದರು.

ಪ್ರತಿಭಟನಾ ಸ್ಥಳಕ್ಕೆ ಗೋಮಾಂಸ ತರಲು ಯತ್ನಿಸಿದ ಇಬ್ಬರು, ಗೋಮಾಂಸ ಹಾಗೂ ಆಟೊವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತಾದರೂ ನಂತರ ತಿಳಿಯಾಯಿತು. ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.

ಡಿಸಿಪಿ ರುದ್ರಮುನಿ, ಎಸಿಪಿ ರಾಜಶೇಖರ್ ಹಾಗೂ ಇಬ್ಬರು ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ನೂರಕ್ಕೂ ಅಧಿಕ ಪೊಲೀಸರು, ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಮತ್ತು ಅಶ್ವಾರೋಹಿ ದಳದ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಪೊಲೀಸರ ಕ್ರಮ ಖಂಡಿಸಿದ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು, ಗೋಮಾಂಸ ಸೇವನೆ ಬಹುಜನರ ಆಹಾರ ಹಕ್ಕು. ಇದನ್ನು ವಿಶ್ವಸಂಸ್ಥೆ ಮಾನ್ಯ ಮಾಡಿದೆ. ಸಂವಿಧಾನದಲ್ಲಿ ಎಲ್ಲಿಯೂ ಗೋ ಮಾಂಸವನ್ನು ತಿನ್ನಬಾರದು ಎಂದು ಹೇಳಿಲ್ಲ. ಹೀಗಿದ್ದ ಮೇಲೆ ಗೋಮಾಂಸ ಸೇವಿಸಲು ತಡೆಯೊಡ್ಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಗುಜರಾತ್‌ನಲ್ಲಿ ಸತ್ತ ದನದ ಚರ್ಮವನ್ನು ಸುಲಿದರು ಎಂಬ ಒಂದೇ ಕಾರಣಕ್ಕೆ ದಲಿತರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ನಮ್ಮ ಆಹಾರ ದನ, ಅದು ನಮ್ಮ ಹಕ್ಕು ಎಂದು ಬಹಿರಂಗವಾಗಿಯೇ ಘೋಷಿಸುತ್ತಿದ್ದೇವೆ ಎಂದು ದಲಿತ ವೆಲ್‌ಫೇರ್ ಟ್ರಸ್ಟ್‌ ಅಧ್ಯಕ್ಷ ಶಾಂತರಾಜು ಸವಾಲೆಸೆದರು.ಇದಕ್ಕೂ ಮುನ್ನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಪೊಲೀಸರ ಕ್ರಮ ಖಂಡಿಸಿ ಘೋಷಣೆಗಳನ್ನು ಕೂಗಲಾಯಿತು.

SCROLL FOR NEXT