ಬೆಂಗಳೂರು: ಪಿಸ್ತೂಲಿನೊಂದಿಗೆ ಮಗುವೊಂದು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆಯೊಂದು ಪೀಣ್ಯದ ಚೊಕ್ಕಸಂದ್ರದಲ್ಲಿ ಸೋಮವಾರ ನಡೆದಿದೆ.
ಇಸ್ರೋ ನಿವೃತ್ತ ನೌಕರ ಗೋವಿಂದಪ್ಪ (55) ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಗೋವಿಂದಪ್ಪ ಅವರು ತಮ್ಮ ಸ್ನೇಹಿತರಾದ ದಾಸರಹಳ್ಳಿ ಮಾಜಿ ಕಾರ್ಪೋರೇಟರ್ ಹಾಗೂ ಬಿಜೆಪಿ ನಾಯಕರಾದ ಮನಿರಾಜು ಎಂಬುವವರನ್ನು ಭೇಟಿಯಾಗಲೆಂದು ನಿನ್ನೆ ಬೆಳಿಗ್ಗೆ 9.30ರ ಸುಮಾರಿಗೆ ಅವರ ಮನೆಗೆ ಹೋಗಿದ್ದರು.
ಮಾತನಾಡುತ್ತಿದ್ದ ವೇಳೆ ಮುನಿರಾಜು ಅವರು ತಮ್ಮ ಬಟ್ಟೆ ಬದಲಿಸಲೆಂದು ರಿವಾಲ್ವರನ್ನು ಟೇಬಲ್ ಮೇಲೆ ಇಟ್ಟು ಒಳ ಹೋಗಿದ್ದಾರೆ. ಈ ವೇಳೆ ಒಳಗಿದ್ದ ಮಗು ಹಾಲ್ ಗೆ ಬಂದು ರಿವಾಲ್ವರ್ ತೆಗೆದುಕೊಂಡು ಆಟವಾಡಲು ಆರಂಭಿಸಿದೆ. ಇದರಂತೆ ಆಕಸ್ಮಿಕವಾಗಿ ಪಿಸ್ತೂಲಿನಿಂದ ಗುಂಡು ಹಾರಿ ಗೋವಿಂದಪ್ಪ ಅವರ ಕತ್ತನ್ನು ಸೀಳಿದೆ.
ಗುಂಡು ಹಾರಿದ ಶಬ್ಧ ಕೇಳುತ್ತಿದ್ದಂತೆ ಮುನಿರಾಜು ಅವರು ರೂಮಿನಿಂದ ಹೊರ ಬಂದಾಗ ಗೋವಿಂದಪ್ಪ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಕೂಡಲೇ ಗೋವಿಂದಪ್ಪ ಅವರನ್ನು ಸ್ಥಳೀಯರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಗೋವಿಂದಪ್ಪ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.
ಯಾವಾಗಲೂ ರಿವಾಲ್ವರನ್ನು ಲಾಕ್ ಮಾಡುತ್ತಿದ್ದೆ. ಆದರೆ, ಅದು ಹೇಗೆ ಅನ್ ಲಾಕ್ ಆಗಿದೆ ಎಂಬುದು ನನಗೆ ತಿಳಿಯುತ್ತಿಲ್ಲ. ರೂಮಿನ ಒಳಗೆ ಹೋದ ನಂತರ ಮಗು ಹಾಲ್ ಗೆ ಬಂದಿದೆ. ನಂತರ ರಿವಾಲ್ವರನ್ನು ತೆಗೆದುಕೊಂಡು ಆಟವಾಡಲು ಆರಂಭಿಸಿದೆ. ಲಾಕ್ ಆಗಿರದ ಕಾರಣ ಗುಂಡು ಹಾರಿದೆ. ನಾನು ಕಳೆದ 15 ವರ್ಷಗಳಿಂದಲೂ ರಿವಾಲ್ವರನ್ನು ಇಟ್ಟುಕೊಂಡಿದ್ದೇನೆ. ಎಂದಿಗೂ ಅದನ್ನು ಬಳಸಿರಲಿಲ್ಲ ಎಂದು ಮುನಿರಾಜು ಅವರು ಹೇಳಿದ್ದಾರೆ.
ಗುಂಡು ಗೋವಿಂದಪ್ಪ ಅವರ ಕುತ್ತಿಗೆಯ ಬಲಭಾಗದಿಂದ ಒಳಹೊಕ್ಕಿ ಎಡಭಾಗದಿಂದ ಹೊರ ಬಂದಿದೆ. ಆದರೆ, ಯಾವುದೇ ಅಂಗಾಗ ಹಾನಿಗೊಂಡಿಲ್ಲ. ಪ್ರಸ್ತುತ ಗೋವಿಂದಪ್ಪ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೇ ರೀತಿಯ ಪ್ರಾಣಾಪಾಯಗಳಿಲ್ಲ ಎಂದು ಯಶವಂತಪುರದಲ್ಲಿರುವ ಸ್ಪರ್ಶ್ ಆಸ್ಪತ್ರೆಯ ಡಾ.ಚಿನ್ನಾದುರೈ ಅವರು ಹೇಳಿದ್ದಾರೆ.
ಪ್ರಸ್ತುತ ಪೀಣ್ಯ ಪೊಲೀಸರು ಬಿಜೆಪಿ ನಾಯಕ ಮುನಿರಾಜು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಂಬಂಧ ಉಪ ಪೊಲೀಸ್ ಆಯುಕ್ತ (ಉತ್ತರ ವಿಭಾಗ) ಟಿ.ಆರ್ ಸುರೇಶ್ ಮುನಿರಾಜು ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ಪ್ರಕರಣ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ನಂತರ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳು ಎಲ್ಲಾ ಅನುಮಾನಗಳಿಗೂ ತೆರೆ ಎಳೆದಿತ್ತು.
ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಆಟವಾಡುತ್ತಿದ್ದಾಗ ಮಗು ಆಕಸ್ಮಿಕವಾಗಿ ಗುಂಡು ಹಾರಿಸಿರುವ ದೃಶ್ಯ ಕಂಡುಬಂದಿತ್ತು ಎಂದು ಟಿ.ಆರ್ ಸುರೇಶ್ ಅವರು ಹೇಳಿದ್ದಾರೆ.