ರಾಜ್ಯ

ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರಿಂದ ಭೂ ಕಬಳಿಕೆ?

Shilpa D

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್ ವಿರುದ್ಧ ನಿಯಮ ಬಾಹಿರವಾಗಿ ಸರ್ಕಾರಿ ಭೂಮಿ ಕಬಳಿಸಿದ ಆರೋಪ ಕೇಳಿ ಬಂದಿದೆ. ಅರವಿಂದ ಜಾಧವ್‌ ಅವರ ತಾಯಿ ತಾರಾಬಾಯಿ ಮಾರುತಿರಾವ್ ಜಾಧವ್‌  ಆನೇಕಲ್‌ ತಾಲೂಕಿನ ಸರ್ಜಾಪುರ  ಹೋಬಳಿ ರಾಮನಾಯಕನಹಳ್ಳಿಯಲ್ಲಿ  ಖರೀದಿಸಿರುವ ಸರ್ಕಾರಿ ಭೂಮಿ ಈಗ ವಿವಾದಕ್ಕೆ ಕಾರಣವಾಗಿದೆ.

ಈ ಜಮೀನಿಗೆ  ದಾಖಲೆ ಸೃಷ್ಟಿಸಲು ಮುಖ್ಯ ಕಾರ್ಯದರ್ಶಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆಂಬ ಆರೋಪವೂ  ಕೇಳಿಬಂದಿದೆ. ಜೂನ್‌ ತಿಂಗಳಲ್ಲಿ ನಿವೃತ್ತರಾಗಿದ್ದ ಜಾಧವ್‌ ಅವರ ಸೇವಾವಧಿ ಮೂರು ತಿಂಗಳು ವಿಸ್ತರಣೆಯಾಗಿತ್ತು. ಮತ್ತೊಂದು ವಿಸ್ತರಣೆಗೆ ಅವರು ಯತ್ನಿಸಿದ್ದಾರೆಂಬ ಮಾತು ಕೇಳಿಬಂದಿರುವ ಬೆನ್ನಲ್ಲೇ, ಅಧಿಕಾರ ದುರುಪಯೋಗದ ದೂರು ಬಂದಿದೆ.

ಸರ್ವೆ ನಂ 29/ಪಿ 27, 29/ಪಿ 28, 118,119ರಲ್ಲಿ ಒಟ್ಟು 76.36 ಎಕರೆ ಸರ್ಕಾರಿ ಜಮೀನಿತ್ತು. ಈ ಜಮೀನು 58 ಜನರಿಗೆ ಮಂಜೂರಾಗಿತ್ತು ಎಂದು ಹೇಳಲಾಗುತ್ತಿದ್ದು,  ಸದರಿ ಜಮೀನಿನಲ್ಲಿ 8. 30 ಗುಂಟೆ  ಭೂಮಿಯನ್ನು 2000 ಇಸವಿ ಬಳಿಕ ಅರವಿಂದ ಜಾಧವ್‌ ಅವರ ತಾಯಿ ತಾರಾಬಾಯಿ ಖರೀದಿಸಿದ್ದಾರೆ ಎನ್ನಲಾಗಿದೆ.

ಈ ಭೂಮಿ ಮಂಜೂರಾತಿಗೆ ಸಬಂಧಿಸಿದಂತೆ ಯಾವುದೇ ಮೂಲ ದಾಖಲಾತಿಗಳು ಸರ್ಕಾರಿ ಕಚೇರಿಯಲ್ಲಿ ಇರಲಿಲ್ಲ. ಅರವಿಂದ ಜಾಧವ್‌ ಮುಖ್ಯಕಾರ್ಯದರ್ಶಿ ಆದ ಬಳಿಕ ದಾಖಲೆ ಪುನರ್‌ನಿರ್ಮಾಣ ಮಾಡುವ ಪ್ರಕ್ರಿಯೆ ಆರಂಭವಾಯಿತು ಎನ್ನಲಾಗಿದೆ. ಇನ್ನೂ ಧಾರವಾಡ ಮೂಲದವರಾದ ಅರವಿಂದ್ ಜಾದವ್ ತಾಯಿಗೆ ಯಾವ ಕೋಟಾ ಅಡಿಯಲ್ಲಿ ಜಮೀನು ನೀಡಲಾಗಿದೆ, ಅವರು ಯಾವ ರೀತಿಯ ಕೃಷಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗಳು ಎದುರಾಗಿವೆ.

ಇನ್ನೂ ಈ ಸಂಬಂಧ ಕಾಗೋಡು ತಿಮ್ಮಪ್ಪ ವರದಿ ಕೇಳಿದ್ದು ಇಂದೇ ವರದಿ ನೀಡಲಾಗುವುದು ಎಂದು ತಿಳಿದು ಬಂದಿದೆ. ಸುಮಾರು 200 ಕೋಟಿ ರೂ. ಮೌಲ್ಯದ ಭೂಮಿ ಇದಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ನೀಡಲಾಗಿದೆ.

SCROLL FOR NEXT