ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶ್ರೀನಿವಾಸ್ ಭಟ್ ಮತ್ತು ರಾಘವೇಂದ್ರ ಅವರಿಗೆ ವಿಧಿಸಲಾಗಿದ್ದ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್.6 ರವರೆಗೆ ವಿಸ್ತರಿಸಲಾಗಿದೆ.
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ನಿನ್ನೆಯಷ್ಟೇ ವಿಚಾರಣೆ ನಡೆಸಿರುವ ನ್ಯಾಯಾಧೀಶ ರಾಜೇಶ್ ಕರ್ನಮ್ ಅವರು, ಬಂಧಿತ ಆರೋಪಿಗಳಾದ ಶ್ರೀನಿವಾಸ್ ಭಟ್ ಮತ್ತು ರಾಘವೇಂದ್ರ ಅವರಿಗೆ ಸೆ.6 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಕೊಲೆ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇಬ್ಬರು ಆರೋಪಿಗಳ ಸಿಐಡಿ ಬಂಧನ ನಿನ್ನೆಯಷ್ಟೇ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಮತ್ತೆ ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಅಧಿಕಾರಿಗಳು ಬಂಧನವನ್ನು ವಿಸ್ತರಿಸುವಂತೆ ಮನವಿ ಮಾಡಿತ್ತು. ಇದರಂತೆ ಇಬ್ಬರು ಆರೋಪಿಗಳಿಗೂ ಸೆ.6 ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.
ಪ್ರಕರಣ ಸಂಬಂಧ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಸೆಡ್ತಿ ಮತ್ತು ಸಹೋದರ ಸುರೇಶ್ ಅವರ ರಕ್ತದ ಮಾದರಿಯನ್ನು ಸರ್ಕಾರಿ ವೈದ್ಯರು ಸಂಗ್ರಹಿಸಿದ್ದು, ಪೊಲೀಸರು ಶೀಘ್ರದಲ್ಲೇ ರಕ್ತದ ಮಾದರಿಯನ್ನು ಡಿಎನ್ ಎ ಪರೀಕ್ಷೆಗೆ ಕಳುಹಿಸಲಿದ್ದಾರೆಂದು ತಿಳಿದುಬಂದಿದೆ.