ಬೆಂಗಳೂರು: ನಗರದಲ್ಲಿ ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಮತ್ತೊಂದು ಪ್ರಕರಣ ನಡೆದಿದೆ. ನಿನ್ನೆ ಯಲಹಂಕದ ವೆಂಕಟಲ ಎಂಬಲ್ಲಿ ಮಧ್ಯಾಹ್ನ 1.15ರ ಸುಮಾರಿಗೆ ಪಾನಮತ್ತ ಶಾಲಾ ವ್ಯಾನು ಚಾಲಕ ಹತೋಟಿ ಕಳೆದುಕೊಂಡು ಎರಡು ವಾಹನಗಳಿಗೆ ಢಿಕ್ಕಿ ಹೊಡೆದು ವಿಭಜಕಕ್ಕೆ ಹೋಗಿ ಢಿಕ್ಕಿ ಹೊಡೆದಿದ್ದಾನೆ. ಅದೃಷ್ಟವಶಾತ್ 20 ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಯಲಹಂಕದ ನಾರಾಯಣ ಇ-ಟೆಕ್ನೋ ಶಾಲೆಯ ವ್ಯಾನ್ ಚಾಲಕ ಆನಂದನನ್ನು ಪೊಲೀಸರು ಪರೀಕ್ಷಿಸಿದಾಗ ಅನುಮತಿ ಮಿತಿಗಿಂತ 10 ಪಟ್ಟು ಹೆಚ್ಚು ಆಲ್ಕೋಹಾಲ್ ಸೇವಿಸಿರುವುದು ಪತ್ತೆಯಾಗಿದೆ. ಆಲಂದ್ 440 ಮಿಲಿ ಗ್ರಾಂ ಮದ್ಯಪಾನ ಸೇವಿಸಿದ್ದ ಎಂದು ಗೊತ್ತಾಗಿದೆ.
ನಿನ್ನೆ ಮತ್ತೊಬ್ಬ ಶಾಲಾ ವ್ಯಾನು ಚಾಲಕ ವೈಟ್ ಫೀಲ್ಡ್ ನಲ್ಲಿ ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದು, ಈ ಮೂಲಕ ಕಳೆದ ಎರಡು ವಾರಗಳಲ್ಲಿ ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸಿ ಸಿಕ್ಕಿಬಿದ್ದ ಪ್ರಕರಣ ಎಂಟಕ್ಕೇರಿದೆ.
ನಿಗದಿಗಿಂತ ಹೆಚ್ಚು ವೇಗವಾಗಿ ವ್ಯಾನನ್ನು ಚಾಲನೆ ಮಾಡುತ್ತಿದ್ದ ಆನಂದ್ ಮಕ್ಕಳನ್ನು ಮಧ್ಯಾಹ್ನ ಗಾಡಿಯಲ್ಲಿ ಹೇರಿಕೊಂಡು ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಮೊದಲು ದ್ವಿಚಕ್ರ ವಾಹನಕ್ಕೆ, ನಂತರ ಆಟೋಗೆ ಹೋಗಿ ಢಿಕ್ಕಿ ಹೊಡೆದಿದ್ದಾನೆ. ನಂತರ ವಿಭಜಕಕ್ಕೆ ಹೋಗಿ ಢಿಕ್ಕಿ ಹೊಡೆದಿದ್ದಾನೆ. ಕೂಡಲೇ ಅಲ್ಲಿ ಸಾರ್ವಜನಿಕರು ಸೇರಿ ಮಕ್ಕಳನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಮಕ್ಕಳು ಭೀತರಾಗಿ ಅಳುತ್ತಿದ್ದರು.
ಸ್ಥಳಕ್ಕೆ ಧಾವಿಸಿದ ಯಲಹಂಕ ಸಂಚಾರ ಪೊಲೀಸರು ಚಾಲಕನನ್ನು ಬಂಧಿಸಿದರು. ಶಾಲಾ ಅಧಿಕಾರಿಗಳಿಗೆ ಬೇರೆ ಬಸ್ಸನ್ನು ಮಕ್ಕಳಿಗೆ ವ್ಯವಸ್ಥೆಗೊಳಿಸುವಂತೆ ಪೊಲೀಸರು ಸೂಚಿಸಿದರು.
ಚಾಲಕನ ವಿರುದ್ಧ ಅಜಾಗರೂಕತೆ ಮತ್ತು ವೇಗದ ಚಾಲನೆಯ ಕೇಸು ದಾಖಲಿಸಲಾಗಿದೆ.
ನಿನ್ನೆ ನಡೆದ ಮತ್ತೊಂದು ಘಟನೆಯಲ್ಲಿ, ದೆಹಲಿ ಪಬ್ಲಿಕ್ ಶಾಲೆಯ 30 ವರ್ಷದ ಚಾಲಕನನ್ನು ವೈಟ್ ಫೀಲ್ಡ್ ಸಂಚಾರ ಪೊಲೀಸರು ಬಂಧಿಸಿದ್ದರು. ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದ ರಾಮಚಂದ್ರ ಎಂಬಾತನ ವ್ಯಾನಿಗೆ ಸಣ್ಣ ಅಪಘಾತವಾಗಿತ್ತು. ಸ್ಥಳಕ್ಕೆ ಧಾವಿಸಿ ಪೊಲೀಸರು ತಪಾಸಣೆ ನಡೆಸಿದಾಗ ಆಲ್ಕೋಹಾಲ್ ಸೇವಿಸಿರುವುದು ಪತ್ತೆಯಾಗಿದೆ. ಆತನ ವಿರುದ್ದವೂ ಕೇಸು ದಾಖಲಿಸಲಾಗಿದೆ.