ರಾಜ್ಯ

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ವಾರದೊಳಗೆ ನಿಲ್ಲಿಸಿ: ಬಿಬಿಎಂಪಿ

Sumana Upadhyaya
ಬೆಂಗಳೂರು: ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಆಸ್ತಿ ಮಾಲಿಕರಿಗೆ ಅದನ್ನು ಮುಚ್ಚಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಏಳು ದಿನಗಳ ಕಾಲಾವಕಾಶ ನೀಡಿದೆ. 
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈ ಕುರಿತು ಸಾರ್ವಜನಿಕ ನೊಟೀಸ್ ಬಿಡುಗಡೆ ಮಾಡಿದ್ದು, 2015ರ ಯೋಜನೆ ಮತ್ತು ವಲಯ ನಿಯಮಗಳನ್ನು ಮೀರಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ. ಹಾಗಾಗಿ ಅದನ್ನು ನಿಲ್ಲಿಸುವಂತೆ ನೊಟೀಸ್ ನೀಡಿದ್ದೇವೆ ಎಂದು ಹೇಳಿದರು.
ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಿದರೆ ಟ್ರಾಫಿಕ್ ಸಮಸ್ಯೆಯುಂಟಾಗುತ್ತದೆ. ನಿವಾಸಿಗಳಿಗೆ ತೊಂದರೆಯುಂಟಾಗುತ್ತದೆ ಎಂದು ಆಯುಕ್ತರು ಹೇಳಿದ್ದಾರೆ. ಅನಧಿಕೃತ ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.
ವಸತಿ ಬಡಾವಣೆ ಅಥವಾ ಪ್ರದೇಶಗಳ ಪಾರ್ಕಿಂಗ್ ಜಾಗ, ಬೇಸ್ ಮೆಂಟ್, ನೆಲಮಹಡಿಗಳಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆಗೆ ವಿರುದ್ಧವಾಗಿ ಅಂಗಡಿ ಇಟ್ಟರೆ ಅದು ಕರ್ನಾಟಕ ಕಾರ್ಪೊರೇಷನ್ ಕಾಯ್ದೆ ಪ್ರಕಾರ ಉಲ್ಲಂಘವಾಗುತ್ತದೆ. 
ಅಂಗಡಿ ಮಾಲಿಕರು ನೊಟೀಸಿಗೆ ಮಾನ್ಯತೆ ನೀಡಿ ಅವರಷ್ಟಕ್ಕೆ ನಿಲ್ಲಿಸಿದರೆ ಉತ್ತಮ, ಇಲ್ಲದಿದ್ದರೆ ಕೆಎಂಸಿ ಕಾಯ್ದೆ 1976ರ ಪ್ರಕಾರ ಪಾಲಿಕೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
SCROLL FOR NEXT