ಕಂದಾಯ ಸಚಿವ ಕಾಗೋಡು ತಿಮ್ಮಪ್ಪ
ಬೆಂಗಳೂರು: ಹಿಂಗಾರು ಮಳೆ ವೈಫಲ್ಯದಿಂದಾಗಿ ರಾಜ್ಯದಲ್ಲಿ ಸುಮಾರು 8 ರಿಂದ 10 ಲಕ್ಷ ಪ್ರದೇಶ ಬಿತ್ತನೆ ಮಾಡಿದ್ದ ಬೆಳೆ ನಷ್ಟವಾಗಿದ್ದು, ಇದರಿಂದ ಸುಮಾರು 10 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿರಬಹುದು ಎಂದು ಅಂದಾಜು ಮಾಡಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ವಿಧಾನ ಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ನಷ್ಟದ ಪ್ರಮಾಣ ನಿಖರ ಮಾಹಿತಿ ಸಂಗ್ರಹಿಸಿದ ನಂತರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಆರ್ಥಿಕ ನೆರವಿಗಾಗಿ ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದರು.
ಮುಂಗಾರು ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಸುಮಾರು 470 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮಾತನಾಡಿದ ಕಂದಾಯ ಸಚಿವರು ಕೇಂದ್ರದ ಬರ ಅಧ್ಯಯನ ತಂಡ ರಾಜ್ಯದ 15 ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದರೂ, ಈ ವರ್ಷ ಈವರೆವಿಗೂ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಈ ತಿಂಗಳ ಅಂತ್ಯಕ್ಕೆ ಹಣ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಇದೆ ಎಂದರು.
ಇಲಾಖೆಯಲ್ಲಿ 1600 ಸರ್ವೆಯರ್‍ಗಳ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ 2 ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದ ಅವರು ಬಗರ್‍ಹುಕಂ ಸಾಗುವಳಿ ಅರ್ಜಿಗಳು 4 ಲಕ್ಷ ಇದ್ದು ಇವುಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics