ಐಟಿ ದಾಳಿ ವೇಳೆ ಪತ್ತೆಯಾದ ನಗದು - ಜಯಚಂದ್ರ
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ನೂರಾರು ಕೋಟಿ ರುಪಾಯಿ ಆಸ್ತಿ ಪತ್ತೆಯಾಗಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಯೋಜನಾಧಿಕಾರಿ ಎಸ್.ಸಿ.ಜಯಚಂದ್ರ ಅವರನ್ನು ಬುಧವಾರ ಸಿಬಿಐ ವಿಶೇಷ ಕೋರ್ಟ್ ಜನವರಿ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಕಳೆದ ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಜಯಚಂದ್ರ ಅವರನ್ನು ಬಾಡಿ ವಾರಂಟ್ ಮೂಲಕ ತಮ್ಮ ವಶಕ್ಕೆ ಪಡೆದಿದ್ದ ಸಿಬಿಐ ಅಧಿಕಾರಿಗಳು, ತೀವ್ರ ವಿಚಾರಣೆಯ ನಂತರ ಇಂದು ಸಿಬಿಐ ವಿಶೇಷ ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಬಿ.ಧರ್ಮೇಗೌಡ ಅವರು, ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ವಾರ ಸಿಬಿಐ ವಿಶೇಷ ನ್ಯಾಯಾಲಯ ಜಯಚಂದ್ರ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ 5 ಲಕ್ಷ ರುಪಾಯಿ ಮೊತ್ತದ ಎರಡು ಬಾಂಡ್ ಮತ್ತು ಪಾಸ್‌ಪೋರ್ಟ್ ಅನ್ನು ನ್ಯಾಯಾಲಯದ ವಶಕ್ಕೆ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಸ್ಥಳದಲ್ಲೇ ಪಾಸ್‌ಪೋರ್ಟ್ ಒಪ್ಪಿಸಲು ಜಯಚಂದ್ರ ಅವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಒಂದು ದಿನದ ಮಟ್ಟಿಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ನ್ಯಾಯಾಂಗ ಬಂಧನದಲ್ಲಿದ್ದ ಜಯಚಂದ್ರ ಅವರನ್ನು ಸಿಬಿಐ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಕಪ್ಪುಹಣ ಬಿಳಿ ಮಾಡಿದ ಪ್ರಕರಣ ಮತ್ತು ಅಕ್ರಮ ಆಸ್ತಿ ಸಂಪಾದಿಸಿದ ಆರೋಪದಲ್ಲಿ ಜಯಚಂದ್ರ ವಿರುದ್ಧ ಸಿಬಿಐ ಮತ್ತು ಎಸಿಬಿ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿವೆ.
ಐಟಿ ದಾಳಿಯ ನಂತರ ರಾಜ್ಯ ಸರ್ಕಾರದ ಸೇವೆಯಿಂದ ಅಮಾನತುಗೊಂಡಿರುವ ಭ್ರಷ್ಟ ಅಧಿಕಾರಿಗಳಾದ ಟಿಎನ್ ಚಿಕ್ಕರಾಯಪ್ಪ ಹಾಗೂ ಎಸ್‌ಸಿ ಜಯಚಂದ್ರ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ, ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಎಸಿಬಿ ತನಿಖೆ ನಡೆಸುತ್ತಿದ್ದು, ಜಾರಿ ನಿರ್ದೇಶನಾಲಯದ ವಿಚಾರಣೆ ನಂತರ ಈಗ ಸಿಬಿಐ ವಿಚಾರಣೆ ಎದುರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos