ರಾಜ್ಯ

ಬೆಂಗಳೂರು: 2 ರಿಯಲ್ ಎಸ್ಟೇಟ್ ಕಚೇರಿಗಳ ಮೇಲೆ ಐಟಿ ದಾಳಿ, 160 ಕೋಟಿ ಅಕ್ರಮ ಸಂಪತ್ತು ವಶ

Shilpa D

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಗರದ ರಿಯಲ್‌ ಎಸ್ಟೇಟ್‌ ಡೆವಲಪರ್ಸ್‌ ಹಾಗೂ ಮಾಲ್‌ಗಳ ಮಾಲೀಕರ ಕಚೇರಿ ಮತ್ತು ಮನೆಗಳ ಮೇಲೆ ನಡೆಸಿದ ದಾಳಿಯಲ್ಲಿ ಇದುವರೆಗೂ ಸುಮಾರು ರು. 169 ಕೋಟಿ  ಅಕ್ರಮ ಸಂಪತ್ತನ್ನು ಜಪ್ತಿ ಮಾಡಿದ್ದಾರೆ.

ಡಿಸೆಂಬರ್ 23 ರಿಂದ 26 ರವರೆಗೆ ನಡೆದ ದಾಳಿಯಲ್ಲಿ ಇದುವರೆಗೆ ಒಟ್ಟು ರು.169 ಕೋಟಿ ಮೌಲ್ಯದ ಅಕ್ರಮ ಸಂಪತ್ತು ಪತ್ತೆ ಹಚ್ಚಲಾಗಿದೆ ಎಂದು ಆದಾಯ ತೆರಿಗೆ ಪ್ರಕಟಣೆ ತಿಳಿಸಿದೆ. ಆದರೆ ಆ ರಿಯಲ್ ಎಸ್ಟೇಟ್ ಕಂಪನಿಗಳ ಹೆಸರನ್ನು ಬಹಿರಂಗ ಪಡಿಸಲು ಅದಿಕಾರಿಗಳು ನಿರಾಕರಿಸಿದ್ದಾರೆ.

ಎರಡು ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳು ಆದಾಯ ತೆರಿಗೆ ಬಲೆಯಿಂದ ತಪ್ಪಿಸಿಕೊಳ್ಳಲು  ವಸತಿ  ಸೌಕರ್ಯ ಕಲ್ಪಿಸಿದ ನಕಲಿ ರಸೀದಿಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದ್ದರು. ಸ್ವತ್ತು ವಹಿವಾಟಿನ ಮೌಲ್ಯದ ರಸೀದಿಗಳನ್ನೂ ಸೃಷ್ಟಿಸುತ್ತಿದ್ದರು. ಈ ಪ್ರಕರಣದಲ್ಲಿ ರು. 143 ಕೋಟಿ ಅಕ್ರಮ ನಡೆಸಿರುವುದು ಪತ್ತೆಯಾಗಿದೆ.

ಮಾಲ್‌ಗಳ ಮಾಲೀಕರು ರು. 26 ಕೋಟಿ ಆದಾಯ ಘೋಷಿಸಿಕೊಳ್ಳದೇ ಇರುವುದನ್ನು ಪತ್ತೆ ಮಾಡಲಾಗಿದೆ. ಸರಕುಗಳನ್ನು ನಗದು ಮೂಲಕ ಮಾರಿದ್ದನ್ನು ಮತ್ತು ಸ್ವೀಕರಿಸಿದ್ದನ್ನು ದಾಖಲೆಯಲ್ಲಿ ತೋರಿಸಿಲ್ಲ. ಅಲ್ಲದೆ, ಅಪಾರ ಮೊತ್ತವನ್ನು ಚಿನ್ನ ಮತ್ತು ಆಭರಣದ ಮೇಲೆ ಹೂಡಿಕೆ ಮಾಡಿರುವುದು ಪತ್ತೆ ಆಗಿದೆ ಎಂದು  ಪ್ರಕಟಣೆ ತಿಳಿಸಿದೆ.

ಬೆಂಗಳೂರಿನ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್ ಗಳ ಮೇಲೆ ನಡೆಸಿದ್ದಾರೆ. ಹಣದ ಜಮಾವಣೆ, ವಿವಿಧ ಸಂಘಟನೆಗಳಿಗೆ ನೀಡುವ ಸಾಲದ ಬಗ್ಗೆ ಪರಿಶೀಲನೆ ನಡೆಸಿದೆ.  ನಾಲ್ಕು ಅಧಿಕಾರಿಗಳು ಡಿಸಿಸಿ ಬ್ಯಾಂಕ್ ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

SCROLL FOR NEXT