ಮೈಸೂರು: ಮೈಸೂರು ರಾಜ ಮನೆತನದ ಮಹಾರಾಜ ಯದುವೀರ್ ವಿವಾಹ ಮೇ 18 ಕ್ಕೆ ಮೈಸೂರು ಅರಮನೆಯಲ್ಲಿ ನಡೆಸಲು ಸಿದ್ಧತೆಗಳು ಆರಂಭವಾಗಿವೆ.
ಶೃಂಗೇರಿ ಶ್ರೀಗಳ ಸೂಚನೆಗಾಗಿ ಕಾಯಲಾಗುತ್ತಿದ್ದು, ಐದು ದಿನಗಳ ಕಾಲ ನಡೆಯುವ ವಿವಾಹ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ವಿವಿಧ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅರಮನೆ ಮೂಲಗಳು ಖಚಿತಪಡಿಸಿವೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಮೈಸೂರು ಸಂಸ್ಥಾನಕ್ಕೆಯದುವೀರ್‌ರನ್ನು ದತ್ತು ಪಡೆದು ನಂತರ ಮೇ ತಿಂಗಳಿನಲ್ಲಿ ಮೈಸೂರು ಮಹಾಸಂಸ್ಥಾನದ ಮಹಾರಾಜರಾಗಿ ಪಟ್ಟಾಭಿಷೇಕ ನಡೆಸಲಾಯಿತು. ಆಗ ಯದುವೀರ್‌ಗೆ ಶ್ರೀ ಯದುವೀರ ಕೃಷ್ಣಚಾಮರಾಜ ಒಡೆಯರ್ ಎಂದು ನಾಮಕರಣ ಸಹ ಮಾಡಲಾಯಿತು.
ರಾಜಸ್ಥಾನದ ದುಂಗಾಪುರದ ರಾಜವಶಂಸ್ಥೆಯಾದ ತ್ರಿಶಿಕಾ ಕುಮಾರಿ ಜತೆ ನಿಶ್ಚಿತಾರ್ಥ ಸಹ ನಡೆದಿದ್ದು, ತ್ರಿಶಿಕಾ ಕುಮಾರಿ ಮಹಾರಾಜರ ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳುವ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಮೇ ತಿಂಗಳ 8 ಅಥವಾ 18 ರಂದು ಮಹಾರಾಜ ಯದುವೀರ್ ಮದುವೆಗೆ ಸಿದ್ಧತೆಗಳು ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಮಹಾರಾಣಿ ಫೆ.15 ರಂದು ಅರಮನೆಯಲ್ಲಿ ರಾಜಪುರೋಹಿತರ ಸಭೆ ನಡೆಸಿದ್ದು ಸಭೆಯಲ್ಲಿ ಯದುವೀರ್ ಅದ್ದೂರಿ ಮದುವೆಗೆ ಯಾವ್ಯಾವ ರೀತಿ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕೆಂಬ ಬಗ್ಗೆ ಸಂಪೂರ್ಣ ಚರ್ಚೆಯಾಗಿದೆ. ಈ ಸಭೆಯಲ್ಲಿ ಯದುವೀರ್ ಸಹ ಭಾಗಿಯಾಗಿದ್ದರು.