ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕೋರ್ಸ್ ವಿಚಾರದಲ್ಲಿ ನಿಯಮ ಉಲ್ಲಂಘಿಸಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ವಿಧಾನ ಪರಿಷತ್ತಿನ ಹಕ್ಕುಬಾಧ್ಯತಾ ಸಮಿತಿ ಸೋಮವಾರ ಶಿಫಾರಸ್ಸು ಮಾಡಿದೆ.
ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಗಳು ಅಕ್ರಮವಾಗಿ ಆನ್ ಲೈನ್ ಹಾಗೂ ದೂರಶಿಕ್ಷಣ ಕೋರ್ಸ್ ಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ವಂಚಿಸಿರುವುದಾಗಿ ಆರೋಪಗಳು ಕೇಳಿಬಂದಿದ್ದವು. ಮೈಸೂರು ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಗಳ ಕುಲಪತಿಗಳು ತೆಗೆದುಕೊಂಡಿರುವ ಕ್ರಮದಿಂದ ಸದನದ ಹಕ್ಕುಚ್ಯುತಿ ಆಗಿದೆ ಎಂದು ಈ ಹಿಂದೆ ಬಿಜೆಪಿ ನಾಯಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಇನ್ನಿತರೆ ನಾಯಕರು 2015ರಲ್ಲಿ ಗಮನ ಸೆಳೆದಿದ್ದರು. ಇದರಂತೆ ಪ್ರಕರಣ ವಿಚಾರಣೆಗಾಗಿ ಸಮಿತಿಯೊಂದನ್ನು ನೇಮಿಸಲಾಗಿತ್ತು.
ಇದರಂತೆ ನಿನ್ನೆ ನಡೆದ ಅಧಿವೇಶನದಲ್ಲಿ ಸಮಿತಿ ಅಧ್ಯಕ್ಷ ಗೊ. ಮಧುಸೂಧನ್ ಅವರು ವರದಿಯನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿದರು. ವರದಿಯಲ್ಲಿ ವಿವಿಗಳು ನಿಯಮ ಉಲ್ಲಂಘಿಸಿರುವುದಾಗಿ ಸಮಿತಿ ಹೇಳಿದೆ.
ವಿವಿಗಳು ನಿಯಮ ಉಲ್ಲಂಘನೆ ಮಾಡುವ ಮೂಲಕ ಕೋರ್ಸ್ ಗಳನ್ನು ನೇಮಿಸಿದೆ. ಮೈಸೂರು ವಿವಿಯ ಉಪ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮತ್ತು ಮಾಜಿ ಮುಕ್ತ ವಿವಿ ಉಪ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಅವರು ತಪ್ಪಿತಸ್ಥರು.
ಆನ್ ಲೈನ್ ಹಾಗೂ ದೂರಶಿಕ್ಷಣ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಅನಧಿಕೃತವಾಗಿ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಗಳನ್ನು ನೀಡಲಾಗಿದೆ. ತನ್ನ ಭೌಗೋಳಿಕ ಪರಿಮಿತಿಯನ್ನು ಮೀರಿ ಕೋರ್ಸ್ ಗಳನ್ನು ನಡೆಸಿದೆ. ಇದಕ್ಕೆ ಯುಜಿಸಿ, ಎಐಸಿಟಿಇ ಅಥವಾ ಎಂಸಿಐ ಅನುಮತಿಯನ್ನು ಪಡೆಯಲಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.