ರಾಜ್ಯ

ಹೆಚ್ಚಿನ ಸಿಸಿಟಿವಿ ಅಳವಡಿಕೆಗೆ ಪೊಲೀಸರ ಮನವಿ: ನಿರ್ಧಾರ ಕೈಗೊಳ್ಳದ ಬೆಂಗಳೂರು ವಿವಿ

Manjula VN

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಅಳವಡಿಕೆ ಮಾಡುವಂತೆ ರಾಜ್ಯ ಪೊಲೀಸರು ಮನವಿ ಮಾಡಿದ್ದು, ಈ ವರೆಗೂ ಬೆಂಗಳೂರು ವಿಶ್ವವಿದ್ಯಾಲಯ ಯಾವುದೇ ರೀತಿಯ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ ಎಂದು ಮಾತುಗಳು ಕೇಳಿಬರುತ್ತಿವೆ.

ಹೆಚ್ಚುತ್ತಿರುವ ಅಪರಾಧ ಪ್ರಕರಣ ಹಿನ್ನೆಲೆಯಲ್ಲಿ ಜ್ಞಾನಭಾರತಿ ಪೊಲೀಸರು ಬೆಂಗಳೂರು ವಿಶ್ವವಿದ್ಯಾಲಯದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಅಳವಡಿಕೆ ಮಾಡುವಂತೆ ಮನವಿ ಮಾಡಿದೆ. ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಬೇಕೆಂಬ ಮಾದರಿ ತಾಣಗಳನ್ನು ಪೊಲೀಸರು ಗುರ್ತಿಸಿದ್ದು, ಆ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ.

ವಿಶ್ವವಿದ್ಯಾಲಯ ಆವರಣದಲ್ಲಿ ಈಗಾಗಲೇ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿವಿ ಆವರಣದ ಮೇಲೆ ಹೆಚ್ಚಿನ ಕಣ್ಗಾವಲಿರಿಸುವ ಸಲುವಾಗಿ ಮತ್ತೆ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವರೆಗೂ ನಿರ್ಧಾರ ಕೈಗೊಳ್ಳದ ವಿವಿ...
ವಿಶ್ವವಿದ್ಯಾಲಯದ ಆವರಣದಲ್ಲಿ ಈಗಾಗಲೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಹೆಚ್ಚಿನ ಕಣ್ಗಾವಲಿರಿಸುವ ಅವಶ್ಯಕತೆ ಇಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯ ಹೇಳಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಿಶ್ವವಿದ್ಯಾಲಯ 2015-16 ರಲ್ಲಿ ಸಿಸಿಟಿವಿ ಅಳವಡಿಕೆಗಾಗಿ ರು. 10 ಲಕ್ಷ ಹಣವನ್ನು ಖರ್ಚು ಮಾಡಿದೆ. ಪ್ರಸ್ತುತ ಪೊಲೀಸರು ಸಲಹೆ ನೀಡಿರುವ ಸಿಸಿಟಿವಿ ಕ್ಯಾಮೆರಾಗಳು ದುಬಾರಿಯಾದ್ದಾಗಿದೆ. ರಾತ್ರಿ ದೃಶ್ಯಗಳನ್ನು ಸೆರೆಹಿಡಿಯುವ ಸಿಸಿಟಿವಿಗಳನ್ನು ಅಳವಡಿಸಬೇಕೆಂದು ಪೊಲೀಸರು ಸ್ಪಷ್ಟವಾಗಿ ಹೇಳಿದ್ದಾರೆ. ವಿಶ್ವವಿದ್ಯಾಲಯ ಈಗಾಗಲೇ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಸಿಸಿಟಿವಿ ಅಳವಡಿಕೆ ಕಷ್ಟವಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT