ಮಡಿಕೇರಿ: ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ದಿನಕ್ಕೂಂದು ತಿರುವು ಪಡೆಯುತ್ತಿದ್ದು, ಇದೀಗ ಗಣಪತಿ ಅವರ ಪುತ್ರ ನೇಹಾಲ್ ಅವರು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಇತರೆ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಮಡಿಕೇರಿ ಜೆಎಂಎಫ್ ಸಿ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಗಣಪತಿ ಅವರು ನೀಡಿರುವ ಮಾಧ್ಯಮ ಹೇಳಿಕೆ ಆಧಾರದಲ್ಲಿ ಸಚಿವ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎ.ಎಂ.ಪ್ರಸಾದ್ ವಿರುದ್ದ ಮೊಕದ್ದಮೆ ದಾಖಲಿಸುವಂತೆ ಮಡಿಕೇರಿ ಜೆಎಂಎಫ್ ಸಿ ಕೋರ್ಟ್ ನೇಹಾಲ್ ಅವರು ದೂರು ನೀಡಿದ್ದಾರೆ. ಜುಲೈ 18 ರಂದು ಸೋಮವಾರ ಮಡಿಕೇರಿ ನ್ಯಾಯಾಲಯ ದೂರಿನ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಪ್ರಕರಣದಲ್ಲಿ ಸಚಿವ ಜಾರ್ಜ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಹಾಗೂ ಲೋಕಾಯುಕ್ತ ಐ.ಜಿ.ಪಿ. ಪ್ರಣವ್ ಮೊಹಾಂತಿ, ರಾಜ್ಯ ಗುಪ್ತದಳದ ಎಡಿಜಿಪಿ ಎ.ಎಂ.ಪ್ರಸಾದ್ ಅವರನ್ನು ಎರಡನೇ ಮತ್ತು ಮೂರನೇ ಆರೋಪಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಸೋಮವಾರ ಸಂಜೆ 4 ಗಂಟೆ ವೇಳೆಯಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ವಿರಾಜಪೇಟೆಯ ವಕೀಲ ಅಮೃತ್ ನಾಣಯ್ಯ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಸಂಕೇತ್ ಪೂವಯ್ಯ ಮತ್ತು ತನ್ನ ಚಿಕ್ಕಪ್ಪ ಮಾಚಯ್ಯ ಜತೆ ಆಗಮಿಸಿದ 19 ವರ್ಷದ ನೇಹಾಲ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು.
ತನ್ನ ತಂದೆ ಡಿವೈಎಸ್ಪಿ ಗಣಪತಿ ಸಾವಿಗೂ ಮುನ್ನ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಆಧಾರದಲ್ಲಿ ಸಚಿವ ಕೆ.ಜೆ.ಜಾರ್ಜ್, ಲೋಕಾಯುಕ್ತ ಐ.ಜಿ.ಪಿ. ಪ್ರಣವ್ ಮೊಹಾಂತಿ, ರಾಜ್ಯ ಗುಪ್ತದಳದ ಎಡಿಜಿಪಿ ಎ.ಎಂ.ಪ್ರಸಾದ್ ಅವರಿಗೆ ಕಾನೂನು ರೀತ್ಯ ಸಮನ್ಸ್, ನೋಟೀಸ್ ನೀಡಬೇಕು. ಈ ಮೂವರು ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದದ್ದಾಗಿ ತನ್ನ ತಂದೆ ಸಾಯುವ ಮುನ್ನ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಇವರ ಕಿರುಕುಳದಿಂದಾಗಿಯೇ ತನ್ನ ತಂದೆ ಗಣಪತಿ ಸಾವನ್ನಪ್ಪಿದ್ದಾರೆ ಎಂದೂ ನೇಹಲ್ ಗಣಪತಿ ದೂರಿನಲ್ಲಿ ಆರೋಪಿಸಿದ್ದಾರೆ.
ಕುಶಾಲನಗರ ಪೊಲೀಸ್ ಠಾಣೆಗೆ ಜುಲೈ 10 ರಂದು ಈ ಮೂವರ ವಿರುದ್ದ ದೂರು ನೀಡಲು ತೆರಳಿದ ಸಂದರ್ಭ ಪೊಲೀಸರು ದೂರನ್ನು ಸ್ವೀಕರಿಸಲಿಲ್ಲ. ಈ ಮೂವರೂ ಪ್ರಭಾವೀಗಳಾದ್ದರಿಂದಾಗಿ ಕುಶಾಲನಗರ ಪೊಲೀಸರ ಮೇಲೆ ಪ್ರಬಾವ ಬೀರಿದ್ದೇ ದೂರು ನಿರಾಕರಣೆಗೆ ಕಾರಣ ಎಂದು ನೇಹಲ್ ಹೇಳಿದ್ದಾರೆ.