ರಾಜ್ಯ

ಕೆಂಪಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ ಪರಮೇಶ್ವರ

Manjula VN

ಬೆಂಗಳೂರು: ಒಂದರ ಹಿಂದೆ ಒಂದಂತೆ ಅಧಿಕಾರಿಗಳ ಆತ್ಮಹತ್ಯೆ, ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ, ಪೊಲೀಸ್ ಸಿಬ್ಬಂದಿಗಳಿಗೆ ಕಿರುಕುಳ ಹೀಗೆ ನಾನಾ ರೀತಿಯ ಬೆಳವಣಿಗೆಗಳು ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದ್ದು, ಇಲಾಖೆಯಲ್ಲಾಗುತ್ತಿರುವ ಬೆಳವಣಿಗೆ ಕುರಿತಂತೆ ಸಲಹೆಗಾರ ಕೆಂಪಯ್ಯ ವಿರುದ್ಧ ಗೃಹ ಸಚಿವ ಪರಮೇಶ್ವರ್ ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಾಗುತ್ತಿರುವ ಬೆಳವಣಿಗೆಗಳು ರಾಷ್ಟ್ರೀಯ ಪತ್ರಿಕೆಗಳಲ್ಲಿ ಹೆಡ್ ಲೈನ್ ಆಗುತ್ತಿದ್ದು, ಇಲಾಖೆಯ ವಿಚಾರದಲ್ಲಿ ಕೆಂಪಯ್ಯ ಅವರು ಮಾಡುತ್ತಿರುವ ಹಸ್ತಕ್ಷೇಪದ ಕುರಿತು ಪರಮೇಶ್ವರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಕಾಂಗ್ರೆಸ್ ಕಮಾಂಡ್ ಬಳಿಯೂ ಮನವಿಯೊಂದನ್ನು ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಗೃಹ ಸಚಿವ ಸ್ಥಾನ ನೀಡಿದಾಗ ಸಲಹೆಗಾರನ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಮೇಶ್ವರ ಅವರು ತಿಳಿಸಿದ್ದರು. ಈ ವಿಚಾರದ ಬಗ್ಗೆ ಪರಮೇಶ್ವರ ಅವರು ಸಾಕಷ್ಟು ಬಾರಿ ಮುಖ್ಯಮಂತ್ರಿಗಳ ಬಳಿ ಮಾತುಕತೆಯನ್ನೂ ನಡೆಸಿದ್ದಾರೆ.

ಅಲ್ಲದೆ, ಅಧಿಕಾರಿಗಳ ವರ್ಗಾವಣೆ ಹಾಗೂ ಇನ್ನಿತರೆ ಇಲಾಖೆ ವಿಚಾರದಲ್ಲಿ ಕೆಂಪಯ್ಯ ಮೂಗು ತೂರಿಸುತ್ತಿರುವುದರ ಬಗ್ಗೆಯೂ ಪರಮೇಶ್ವರ ಅವರು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ಆದರೆ, ಕೆಂಪಯ್ಯ ವಿರುದ್ಧ ಸಿದ್ದರಾಮಯ್ಯ ಅವರು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಿದ್ಧರಿರಲಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ಇನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲಾಗುತ್ತಿರುವ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಬಳಿ ಪರಮೇಶ್ವರ್ ಅವರು ವರದಿಯೊಂದನ್ನು ಸಲ್ಲಿಸಿದ್ದು, ವರದಿಯಲ್ಲಿ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಇಲಾಖೆಯಲ್ಲಿ ಕೆಂಪಯ್ಯ ಅವರ ಹಸ್ತಕ್ಷೇಪ ಇದೆ. ನೆಪಮಾತ್ರಕ್ಕೆ ನನ್ನನ್ನು ಸಚಿವನೆಂದು ಪರಿಗಣಿಸಲಾಗಿದೆ.

ಇಲಾಖೆಯ ವರ್ಗಾವಣೆ, ಬಡ್ತಿ ಎಲ್ಲಾ ವಿಚಾರದಲ್ಲೂ ಕೆಂಪಯ್ಯ ಮತ್ತು ಮುಖ್ಯಮಂತ್ರಿಗಳು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಇಲಾಖೆಯ ಮೇಲೆ ತಮಗೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

SCROLL FOR NEXT