ರಾಜ್ಯ

ಪ್ರತಿಭಟನೆಯ ಬೆಂಕಿ: ಚರ್ಚೆಯಿಲ್ಲದೆಯೇ 5 ಮಸೂದೆಗಳು ಪಾಸ್

Manjula VN

ಬೆಂಗಳೂರು: ಪ್ರತಿಭಟನೆಯನ್ನು ಬದಿಗಿಟ್ಟು ಮಸೂದೆ ಕುರಿತಂತೆ ಚರ್ಚೆ ನಡೆಸುವಂತೆ ಸ್ಪೀಕರ್ ಕೆ.ಬಿ ಕೋಳಿವಾಡ ಅವರು ಎಷ್ಟು ಬಾರಿ ಮಾಡಿದರೂ, ಪ್ರತಿಪಕ್ಷಗಳು ಪ್ರತಿಭಟನೆಯನ್ನು ಮುಂದುವರೆಸಿದ ಹಿನ್ನೆಲೆಯಲ್ಲಿ 5 ಮಸೂದೆಗಳು ಚರ್ಚೆಯಿಲ್ಲದೆಯೇ ಅಂಗೀಕಾರಗೊಂಡಿದೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಮಸೂದೆ, ಕರ್ನಾಟಕ ಸ್ಟ್ಯಾಂಪು (ತಿದ್ದುಪಡಿ) ಮಸೂದೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ (ತಿದ್ದುಪಡಿ) ಮಸೂದೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಮಸೂದೆಗಳು ಚರ್ಚೆಯಿಲ್ಲದೆಯೇ ಅಂಗೀಕಾರಗೊಂಡಿರುವ ಮಸೂದೆಗಳಾಗಿವೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಮಸೂದೆ

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ನಿರ್ಮಾಣ ಕಾಮಗಾರಿಗಳ ಗುತ್ತಿಗೆ ನೀಡುವಾಗ ಪರಿಶಿಷ್ಟ ಜಾತಿ ಸಮುದಾಯಕ್ಕೆ ರು. 50 ಲಕ್ಷದವರೆಗಿನ ಕಾಮಗಾರಿಗಳನ್ನು ಟೆಂಡರ್ ರಹಿತವಾಗಿ ನೀಡುವ ಉದ್ದೇಶವನ್ನು ಹೊಂದಲಾಗಿದೆ. ರು.50 ಲಕ್ಷ ಮೀರದ ಕಾಮಗಾರಿಯಲ್ಲಿ ಶೇ.17.15 ಪರಿಶಿಷ್ಟ ಜಾತಿ, ಶೇ.6.5 ರಷ್ಟು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲು ಇಡುವುದು ಕಡ್ಡಾಯವಾಗಲಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ
ಈ ಮಸೂದೆ ಕಾಯ್ದೆಯಾಗಿ ಜಾರಿಯಾಗಿದ್ದೇ ಆದರೆ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಇನ್ನು ಮುಂದೆ ಕರ್ನಾಟಕ ರಾಜ್ಯದಿಂದ ಹೊರಗೆ ಯಾವುದೇ ಕೇಂದ್ರಗಳನ್ನು ತೆರೆಯುವಂತಿಲ್ಲ.

ಕರ್ನಾಟಕ ಸ್ಟ್ಯಾಂಪು (ತಿದ್ದುಪಡಿ) ಮಸೂದೆ
ಗಣಿಗಾರಿಕೆ ಪರವಾನಗಿ ನೀಡುವಾಗ ರಾಯಧನ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ವಿಧಿಸುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಹೊಸ ಮಸೂದೆ ಕಾಯ್ದೆಯಾಗಿ ಜಾರಿಯಾದರೆ, 15 ಸಿ ಪ್ರವರ್ಗ ಗಣಿಗಳ ಹರಾಜಿನಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ. ಗಣಿ ಗುತ್ತಿಗೆ ನೀಡಿದ ಪ್ರದೇಶಗಳಲ್ಲಿ ಇರುವ ಖನಿಜದ ಮೌಲ್ಯವನ್ನು ಲೆಕ್ಕ ಹಾಕಿ ರಾಯಧನ, ಭದ್ರತಾ ಠೇವಣಿ, ನೋಂದಣಿ ಮತ್ತು ಮುದ್ರಾಂಕದ ಶುಲ್ಕವನ್ನು ನಿಗದಿ ಮಾಡಲಾಗುತ್ತದೆ.

SCROLL FOR NEXT