ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಬೆಂಬಲ ಸೂಚಿಸಿ ಬೆಂಗಳೂರಿನಲ್ಲಿ ಪ್ರತಿಭಟನೆಗೆ ಸಿದ್ಧತೆ!
ಬೆಂಗಳೂರು: ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಉಗ್ರ ಬುರ್ಹಾನ್ ಮುಜಾಫರ್ ವಾನಿ ಹತ್ಯೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಗಳೂರಿನಲ್ಲಿ ಕೆಲವು ಕಿಡಿಗೇಡಿ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಜು.16ರಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಾಶ್ಮೀರಿ ಪ್ರತ್ಯೇಕತವಾದಿಗಳಿಗೆ ಬೆಂಬಲ ಸೂಚಿಸಿ, ಸೇನೆ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ.
ಕಾಶ್ಮೀರದಲ್ಲಿ ಗಲಭೆ ನಡೆಯುತ್ತಿರುವ ಪ್ರದೇಶದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಹಾಗೂ ಭಾರತ ಆಕ್ರಮಿಸಿಕೊಂಡಿರುವ ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ, ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ಸೂಚಿಸಿ ವಿ ಸ್ಟ್ಯಾಂಡ್ ವಿತ್ ಎಂಬ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತಿರುವುದನ್ನು ವಿರೋಧಿಸಿರುವ ಉತ್ತಿಷ್ಠ ಭಾರತ ಸೇರಿದಂತೆ ಹಲವು ಸಂಘಟನೆಗಳು, ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಬೆಂಬಲ ಸೂಚಿಸಿ ನಡೆಯುವ ಪ್ರತಿಭಟನೆಗೆ ಅನುಮತಿ ನೀಡಬಾರದು ಎಂದು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಇನ್ನು ಪ್ರತಿಭಟನೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿಯೂ ತೀವ್ರ ವಿರೋಧ ವ್ಯಕ್ತವಾಗಿದ್ದು, ಇ-ಮೇಲ್ ಮೂಲಕವೂ ಸಾವಿರಾರು ಜನರು ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
"ಬೆಂಗಳೂರಿನಲ್ಲಿ ಶಾಂತಿಯುತ ವಾತಾವರಣ ಇದೆ. ಕಾಶ್ಮೀರದಲ್ಲಿ ನಡೆದಿರುವ ಘಟನೆಗೆ ಅಲ್ಲಿನ ಪ್ರತ್ಯೇಕತಾವಾದಿಗಳ ಪರಾವಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಇಲ್ಲಿ ಶಾಂತಿಯುತ ವಾತಾವರಣವನ್ನು ಕದಡುವ ದುರುದ್ದೇಶದಿಂದ ಪ್ರತಿಭಟನೆ ನಡೆಸಲಾಗುತ್ತಿದೆ, ಈ ಪ್ರತಿಭಟನೆಗೆ ಬೆಂಗಳೂರು ನಗರ ಆಯುಕ್ತರು ಅನುಮತಿ ನೀಡಬಾರದು ಎಂದು ಉತ್ತಿಷ್ಠ ಭಾರತ ಸಂಘಟನೆಯೊಂದಿಗೆ ಆಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿರುವ ಹಿರಿಯ ಪತ್ರಕರ್ತ, ಸುದ್ದಿ ವಿಶ್ಲೇಷಕ ಮನೀಷ್ ಮೋಕ್ಷಗುಂಡಂ ಹೇಳಿದ್ದಾರೆ.
ದೇಶದ ಸಾರ್ವಭೌಮತೆಗೆ ಧಕ್ಕೆ ತಂದು ಸಮಾಜದಲ್ಲಿ ಅಶಾಂತಿಯುಂಟು ಮಾಡುವ ಹಾಗೂ ಭಾರತೀಯ ಸೈನಿಕರಿಗೆ ಅವಮಾನ ಮಾಡುವ ಈ ಕಾರ್ಯಕ್ರಮವನ್ನು ಎಲ್ಲರೂ ವಿರೋಧಿಸಬೇಕಾಗಿದೆ, ಆದ್ದರಿಂದ ಪ್ರತಿಭಟನೆಗೆ ಮತ್ತು ದೇಶ ದ್ರೋಹದ ಸದ್ದಿಗೆ ಅವಕಾಶ ನೀಡಬಾರದು ಎಂದು ಆಯುಕ್ತರಿಗೆ ಮನವಿ ಸಲ್ಲಿಸುತ್ತಿರುವುದಾಗಿ ನಿಲುಮೆ ಪ್ರಕಾಶನದ ಸಂಸ್ಥಾಪಕ ರಾಕೇಶ್ ಶೆಟ್ಟಿ ಹೇಳಿದ್ದಾರೆ.
ಪ್ರತಿಭಟನೆಯ ಆಯೋಜಕರು ಕಾಶ್ಮೀರದಲ್ಲಿ ಗಲಭೆ ನಡೆಯುತ್ತಿರುವ ಪ್ರದೇಶದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಮುಸ್ಲಿಮರಿಂದ ಸ್ಥಳೀಯ ಮುಸ್ಲಿಮರಿಗೂ ಕೆಟ್ಟ ಹೆಸರು ಬರಲಿದೆ. ನಾವು ಭಾರತೀಯ ಸೇನೆ, ಭಾರತ ಸರ್ಕಾರದೊಂದಿಗಿದ್ದೇವೆ, ದೇಶವಿರೋಧಿಯಾಗಿರುವ ಪ್ರತಿಭಟನಾಕಾರರ ವಿರುದ್ಧ ಆಯುಕ್ತರು ಕ್ರಮ ಕೈಗೊಳ್ಳಬೇಕೆಂದು ಪ್ರತ್ಯೇಕತಾವಾದಿಗಳ ಪರ ಪ್ರತಿಭಟನೆಯನ್ನು ವಿರೋಧಿಸಿ ದೂರು ನೀಡಿರುವ ಉತ್ತಿಷ್ಠ ಭಾರತ ಸಂಘಟನೆ ಬೆಂಬಲಿಗ ಸಯೀದ್ ರಫೀಕ್ ಆಗ್ರಹಿಸಿದ್ದಾರೆ.