ಬೆಂಗಳೂರು: ವಿವಾದಿತ ಫೋಟೋ ಶೂಟ್/ವಿಡಿಯೋ ಶೂಟ್ಗೆ ಅರಮನೆಯ ಆಡಳಿತ ಮಂಡಳಿಯ ಅಧಿಕಾರಿಗಳೇ ಅನುಮತಿ ನೀಡಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಫೋಟೋ ಶೂಟ್ ಮತ್ತು ವಿಡಿಯೋಶೂಟ್ ನಂತಹ ವಾಣಿಜ್ಯ ವ್ಯವಹಾರಗಳಿಗೆ ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರಾದ ಟಿ.ಎಸ್.ಸುಬ್ರಹ್ಮಣ್ಯ ಅವರೇ ಅನುಮತಿ ನೀಡಿದ್ದರು ಎಂದು ತಿಳಿದು ಬಂದಿದೆ.
ನಿಷೇಧದ ನಡುವೆಯೂ ವಿಶ್ವವಿಖ್ಯಾತ ಮೈಸೂರು ಅರಮನೆಯ ಅಂಬಾವಿಲಾಸ ಅರಮನೆಯಲ್ಲಿ ನವವಿವಾಹಿತರ ಫೋಟೋ, ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು. ಇದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟುತ್ತು. ನವಜೋಡಿಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ವಿಚಾರ ಬಹಿರಂಗವಾಗಿತ್ತು. ಅರಮನೆಯ ದರ್ಬಾರ್ ಹಾಲ್, ಕಲ್ಯಾಣಮಂಟಪ ಇನ್ನಿತರೆ ಪ್ರದೇಶದಲ್ಲಿ ಫೋಟೋ ತೆಗೆಯಲಾಗಿದೆ. ದುಬಾರಿ ಕ್ಯಾಮರಾ ಬಳಕೆ ಮಾಡಿ 10 ನಿಮಿಷದ ವಿಡಿಯೋ ಚಿತ್ರೀಕರಣವನ್ನು ಮಾಡಲಾಗಿತ್ತು.
ಇಷ್ಟಕ್ಕೂ ನಿಷೇಧಿತ ಪ್ರದೇಶದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಪುತ್ರ ಆದಿತ್ಯ/ನವ್ಯಾತಾ ಅವರಿಗೆ ಫೋಟೋಶೂಟ್ ಮಾಡಲು ಅನುಮತಿ ನೀಡಿದವರು ಯಾರು ಎಂಬುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದರಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಸೂಕ್ತ ತನಿಖೆಗೆ ಆದೇಶಿಸಿದ್ದರು.
ಇದರಂತೆ ತನಿಖೆ ವೇಳೆ ಫೋಟೋಶೂಟ್ ಗೆ ಅನುಮತಿ ನೀಡಿದ್ದು ಉಪನಿರ್ದೇಶಕರಾದ ಸುಬ್ರಹ್ಮಣ್ಯ ಅವರೇ ಎಂಬ ವಿಚಾರ ಬೆಳಕಿಗೆ ಬಂದಿದೆ. ಈಗಾಗಲೇ ವರದಿ ಪಡೆದಿರುವ ಜಿಲ್ಲಾಧಿಕಾರಿ ಸಭೆ ನಡೆಸಿದ ಬಳಿಕ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮುಂದಿನವಾರ ವರದಿ ಸಲ್ಲಿಸಲು ನಿರ್ಧಾರಿಸಿದ್ದಾರೆಂದು ತಿಳಿದುಬಂದಿದೆ.
ವರದಿ ಕುರಿತಂತೆ ಅಧಿಕಾರಿಗಳು ಈಗಾಗಲೇ ಕೆಲ ನಿಮಿಷಗಳ ಕಾಲ ಸಭೆ ನಡೆಸಿದ್ದು, ಸಭೆ ಕುರಿತು ಕೆಲ ಮುಖ್ಯಅಂಶಗಳು ಈ ಕೆಳಗಿನಂತಿವೆ.
ಅರಮನೆ ಒಳಾಂಗಣ ಮತ್ತು ಹೊರಾಂಗಣ ಪ್ರದೇಶದಲ್ಲಿ 2-3 ತಾಸುಗಳ ಕಾಲ ಫೋಟೋ ಮತ್ತು ವಿಡಿಯೋ ಶೂಟ್ ನಡೆಸಲಾಗಿದೆ. ಅರಮನೆಯ ಒಳಾಂಗಣದಲ್ಲೇ ನವದಂಪತಿಗಳು ಬಟ್ಟೆ ಬದಲಿಸಲು ಕೂಡ ಅನುಮತಿ ನೀಡಲಾಗಿದೆ ಎಂದು ತನಿಖಾ ತಂಡ ಹೇಳಿಕೊಂಡಿದೆ.
2015, ಜೂನ್ 4 ರಂದು ನವದಂಪತಿಗಳ ಶೋಟೋಶೂಟ್ ಗೆ ಸುಬ್ರಹ್ಮಣ್ಯ ಅವರು ಅನುಮತಿ ನೀಡುತ್ತಿದ್ದಂತೆ ಅರಮನೆ ಭದ್ರತಾ ಇನ್ಸ್ ಪೆಕ್ಟರ್ ಮತ್ತು ಮುಖ್ಯ ಪೇದೆಗಳು ಅರಮನೆಯನ್ನು ಬಿಟ್ಟು ಹೋಗಿದ್ದಾರೆ.
ತನಿಖಾ ವರದಿಯನ್ನು ನೋಡಿದರೆ ಫೋಟೋ ಮತ್ತು ವಿಡಿಯೋ ಶೂಟ್ ನ್ನು ವಾಣಿಜ್ಯ ದೃಷ್ಟಿಯಲ್ಲಿ ಮಾಡಲಾಗಿದೆ. ಅರಮನೆ ಆಡಳಿತ ಮಂಡಳಿತ ಉಪಾಧ್ಯಕ್ಷ ಸುಬ್ರಹ್ಮಣ್ಯ ಮತ್ತು ಭದ್ರತಾ ಸಿಬ್ಬಂದಿಗಳ ಅನುಮತಿ ಇಲ್ಲದೆಯೇ ಈ ರೀತಿಯಾಗಿ ಮಾಡಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಪ್ರವಾಸಿಗರು ಅರಮನೆ ಪ್ರವೇಶ ಮಾಡಿದಾಗ ಫ್ಲಾಷ್ ಲೈಟ್ ಇಲ್ಲದೆಯೇ ಫೋಟೋ ತೆಗೆಯುವಂತೆ ನಿಯಮ ಹೇರಲಾಗಿದೆ. ಆದರೆ, ಈ ಪ್ರಕರಣದಲ್ಲಿ ಫೋಟೋ ಮತ್ತು ವಿಡಿಯೋ ಶೂಟ್ ನ್ನು ವಾಣಿಜ್ಯ ದೃಷ್ಟಿಯಿಂದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸುಬ್ರಹ್ಮಣ್ಯ ಅವನ್ನು ಅಮಾನತುಗೊಳಿಸಲು ಸಭೆಯಲ್ಲಿ ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.
ಹೈಕೋರ್ಟ್ ಮೆಟ್ಟಿಲೇರಿದ ಸುಬ್ರಹ್ಮಣ್ಯ
ಅರಮನೆಯಲ್ಲಿ ಫೋಟೋ ಶೂಟ್ ಮಾಡಲು ಅನುಮತಿ ನೀಡಿದ ಉಪನಿರ್ದೇಶಕರನ್ನು ಅಮಾನತುಗೊಳಿಸಿ ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಮ್ಮ ವಿರುದ್ಧ ನೀಡಿರುವ ವಿಚಾರಣೆ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸುಬ್ರಹ್ಮಣ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಕುರಿತಂತೆ ಅರ್ಜಿಯೊಂದನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ಅರ್ಜಿಯನ್ನು ತಿರಸ್ಕರಿಸುವ ನ್ಯಾಯಾಲಯವು ತನಿಖಾ ವರದಿ ಆಧರಿಸಿ ಸರ್ಕಾರವೇ ಕ್ರಮಕೈಗೊಳ್ಳಲಿದೆ ಎಂದು ಹೇಳಿದೆ.