ಮಡಿಕೇರಿ: ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರೊಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೋಮವಾರ ಕೋರ್ಟ್ ಸೂಚಿಸಿದೆ.
ತಮ್ಮ ತಂದೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಈ ಮೂವರು ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಕೋರಿ ಗಣಪತಿ ಅವರ ಪುತ್ರ ನೇಹಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮಡಿಕೇರಿ ಹೆಚ್ಚುವರಿ ಜೆಎಂಎಫ್ ಸಿ ಕೋರ್ಟ್ ನ್ಯಾಯಾಧೀಶೆ ಅನ್ನಪೂರ್ಣೇಶ್ವರಿ ಅವರು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಡಿಕೇರಿ ನಗರ ಠಾಣೆ ಪೊಲೀಸರಿಗೆ ಸೂಚಿಸಿದ್ದಾರೆ.
ಎಫ್ಐಆರ್ ದಾಖಲಿ, ಗಣಪತಿ ಆರೋಪಿಸಿರುವ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ ಎಂದು ನೇಹಾಲ್ ಪರ ವಕೀಲ ಎಂ.ಟಿ.ನಾಣಯ್ಯ ಅವರು ತಿಳಿಸಿದ್ದಾರೆ.
ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ, ತನ್ನ ಸಾವಿಗೆ ಹಿಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರೊಣವ್ ಮೊಹಂತಿ ಮತ್ತು ಎ.ಎಂ.ಪ್ರಸಾದ್ ಕಾರಣ ಎಂದು ದೂರಿದ್ದರು.