ರೈಲ್ವೆ ಸಚಿವ ಸುರೇಶ್ ಪ್ರಭು (ಸಂಗ್ರಹ ಚಿತ್ರ)
ಬೆಂಗಳೂರು: ಸಾಮಾಜಿಕ ತಾಣ ಟ್ವಿಟ್ಟರ್ ಮೂಲಕ ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಜೊತೆ ಪ್ರಯಾಣಿಕರು ತಮ್ಮ ದೂರು, ದುಮ್ಮಾನಗಳನ್ನು, ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಹೀಗೊಬ್ಬ ಪ್ರಯಾಣಿಕ, ಮೀಸಲು ಬೋಗಿಯಲ್ಲಿ ಸಾಮಾನ್ಯ ಬೋಗಿಯ ಪ್ರಯಾಣಿಕರು ಹೋಗಿ ಹತ್ತಿಕೊಳ್ಳುತ್ತಾರೆ ಎಂದು ನಿನ್ನೆ (ಭಾನುವಾರ) ಸಚಿವ ಸುರೇಶ್ ಪ್ರಭು ಅವರಿಗೆ ಟ್ವಿಟ್ಟರ್ ನಲ್ಲಿ ದೂರು ನೀಡಿದ್ದರಂತೆ. ಗಣೇಶ್ ಶಿವರಾಮ್ ಎಂಬ ಪ್ರಯಾಣಿಕ ರೈಲ್ವೆ ಸಚಿವಾಲಯ ಮತ್ತು ಸುರೇಶ್ ಪ್ರಭು ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ನಿನ್ನೆ ಸಾಯಂಕಾಲ 4 ಗಂಟೆ ಸುಮಾರಿಗೆ ಪೋಸ್ಟ್ ಮಾಡಿದ್ದರಂತೆ. ಗೋಲ್ ಗುಂಬಜ್ ನಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು ತುಂಬಾ ಕೆಟ್ಟ ಅನುಭವವಾಗುತ್ತಿದೆ ಎಂದು ಹೇಳಿಕೊಂಡಿದ್ದರಂತೆ.
ಅವರು ಟ್ವಿಟ್ಟರ್ ನಲ್ಲಿ ಕಮೆಂಟ್ ಹಾಕಿದ 40 ನಿಮಿಷಗಳಲ್ಲೇ ಅವರಿಗೆ ರೈಲ್ವೆ ಸಚಿವಾಲಯದಿಂದ ಪ್ರತಿಕ್ರಿಯೆ ಬಂದಿದೆ. ಬೆಂಗಳೂರು ರೈಲ್ವೆ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಈ ವಿಷಯವನ್ನು ಪರಿಶೀಲಿಸುತ್ತಾರೆ ಎಂದು ಪ್ರತಿಕ್ರಿಯೆ ಸಿಕ್ಕಿದೆ. ರೈಲ್ವೆ ಸುರಕ್ಷತಾ ಪಡೆ ಆಗಮಿಸಲಿದೆ ಎಂದು ಹೇಳಿ ಟ್ವೀಟ್ ಬಂದಿತ್ತು. ಇದು ಬಂದು ಕೆಲವು ಹೊತ್ತಾದರೂ ಯಾವ ಕ್ರಮ ಕೈಗೊಂಡಿರಲಿಲ್ಲ. ಎರಡು ಗಂಟೆ ಕಳೆದ ಮೇಲೆ ಶಿವರಾಮ್, ಸುರೇಶ್ ಪ್ರಭು ಮತ್ತು ರೈಲ್ವೆ ಸಚಿವಾಲಯಕ್ಕೆ ಪುನಃ ಟ್ವೀಟ್ ಮಾಡಿ, ಇದುವರೆಗೆ ರೈಲ್ವೆ ಸುರಕ್ಷತಾ ಪಡೆ ಬಂದಿಲ್ಲ ಎಂದು ಕಮೆಂಟ್ ಕಳುಹಿಸಿದರು. ಕೊನೆಗೆ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರು ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ ನಲ್ಲಿ ಇಳಿದು ಹೋದರು.