ರಾಜ್ಯ

ಯೋಧ ಉಮೇಶಪ್ಪ ಹುತಾತ್ಮ: ಹುಟ್ಟೂರು ಶಿವಮೊಗ್ಗದಲ್ಲಿ ನೀರವ ಮೌನ

Manjula VN

ಶಿವಮೊಗ್ಗ: ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಉಮೇಶ್ (38) ಹುತಾತ್ಮರಾದ ಯೋಧರಾಗಿದ್ದಾರೆ. ಸಹ ಯೋಧರೊಂದಿಗೆ ಟ್ರಕ್ ನಲ್ಲಿ ಹೋಗುತ್ತಿದ್ದ ವೇಳೆ ಭೂಕುಸಿತ ಉಂಟಾದ ಪರಿಣಾಮ ಮೂವರು ಯೋಧರು ಉಸಿರುಗಟ್ಟಿ ಹುತಾತ್ಮರಾಗಿದ್ದರು. ಮೂವರಲ್ಲಿ  ಹಾರನಹಳ್ಳಿ ಗ್ರಾಮದ ಉಮೇಶ್ ಅವರೂ ಒಬ್ಬರಾಗಿದ್ದರು.

ಉಮೇಶಪ್ಪ ಅವರ ಸಾವಿನ ಸುದ್ದಿ ಇಡೀ ಗ್ರಾಮ ಆಘಾತಕ್ಕೊಳಗಾಗುವಂತೆ ಮಾಡಿದೆ. ಉಮೇಶ್ ಅವರ ಪಾರ್ಥೀವ ಶರೀರ ಇಂದು ಸಂಜೆ ಬೆಂಗಳೂರಿಗೆ ಆಗಮಿಸಲಿದ್ದು, ಬುಧವಾರ ಬೆಳಗ್ಗೆ ಗ್ರಾಮಕ್ಕೆ ಸೇರುವ ಸಾಧ್ಯತೆಗಳಿವೆ.

ಉಮೇಶ್ ಅವರ ಸಹೋದರ ಶಂಕರ್ ಅವರು ಮಾತನಾಡಿ, ಕಳೆದ ತಿಂಗಳಷ್ಟೇ ಸಂಬಂಧಿಕರ ಮದುವೆ ಹಾಗೂ ಮಗಳ ನಾಮಕರಣ ಸಮಾರಂಭಕ್ಕಾಗಿ ಅಣ್ಣ ಉಮೇಶ ಗ್ರಾಮಕ್ಕೆ ಬಂದಿದ್ದರು. ಇದೀಗ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲು ನಮಗೆ ಹಿಂದಿ ಬರುವುದಿಲ್ಲ ಎಂದು ಹೇಳಿದ್ದಾರೆ.

ಉಮೇಶ್ ಅವರ ಪತ್ನಿ ವೀಣಾ ಅವರು ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಉಮೇಶ್ ಬಳಿ ಮೊಬೈಲ್ ನಲ್ಲಿ ಮಾತನಾಡಿದ್ದರು. ಕೆಲ ಗಂಟೆಗಳ ನಂತರ ಮತ್ತೆ ಅವರ ಮೊಬೈಲ್ ದೆ ಕರೆ ಮಾಡಿದಾಗ ನಾಟ್ ರೀಚೇಬಲ್ (ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ) ಎಂದು ಬಂದಿದೆ. ಉಮೇಶ್ ಪ್ರತೀನಿತ್ಯ 3-4 ಬಾರಿ ಕರೆ ಮಾಡಿ ಮಾತನಾಡುತ್ತಿರುತ್ತಾರೆ. ಕೆಲ ಗಂಟೆಗಳ ಬಳಿಕ ಅಧಿಕಾರಿಗಳು ಕರೆ ಮಾಡಿ ಉಮೇಶಪ್ಪ ಸಾವನ್ನಪ್ಪಿರುವುದಾಗಿ ಮಾಹಿತಿ ನೀಡಿದರು ಎಂದು ಶಂಕರ್ ಹೇಳಿದ್ದಾರೆ.

ಉಮೇಶ್ ಅವರು 2000 ಜನವರಿ 16 ರಂದು ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿ, ನಂತರ ದೂರಶಿಕ್ಷಣದಲ್ಲಿ ಪದವಿ ಪೂರ್ಣಗೊಳಿಸಿದ್ದರು. ಸುಮಾರು 15 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಉಮೇಶ್ ಅವರ ಸೇವಾ ಅವಧಿ ಮತ್ತೆ 2 ವರ್ಷಗಳ ಕಾಲ ವಿಸ್ತರಣೆಯಾಗಿತ್ತು. ಶಿಕಾರಿಪುರ ತಾಲ್ಲೂಕಿನ ಕಿಟ್ಟದಹಳ್ಳಿಯ ವೀಣಾ ಎಂಬುವವರನ್ನು ವಿವಾಹವಾಗಿದ್ದ ಉಮೇಶ್ ಅವರಿಗೆ ನಾಲ್ಕು ವರ್ಷದ ತನ್ಮಯ್ ಎಂಬ ಪುತ್ರ ಹಾಗೂ 7 ತಿಂಗಳಿನ ಶ್ರೀರಕ್ಷಾ ಎಂಬ ಹೆಣ್ಣು ಮಗುವಿದೆ.

SCROLL FOR NEXT