ಬೆಂಗಳೂರು: ಆರೋಗ್ಯ ಸಚಿವ ರಮೇಶ್ ಕುಮಾರ್ ಸಲಹೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೆಜೆ ಜಾರ್ಜ್ ರಿಂದ ರಾಜಿನಾಮೆ ಪಡೆಯಲು ಮುಖ್ಯ ಕಾರಣ.
ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಕೆಜೆ ಜಾರ್ಜ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಡಿಕೇರಿ ಜೆಎಂಎಫ್ಸಿ ಕೋರ್ಟ್ ಆದೇಶಿಸಿತ್ತು. ಈ ಆದೇಶ ಬಂದ ನಂತರ ಸುಮಾರು 30 ನಿಮಿಷಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ ರಮೇಶ್ ಕುಮಾರ್ ಅವರು, ಕೂಡಲೇ ಜಾರ್ಜ್ ರಾಜಿನಾಮೆಗೆ ಸೂಚಿಸುವುದು ಸರಿ ಎಂದು ಸಲಹೆ ನೀಡಿದ್ದರಂತೆ. ಕೋರ್ಟ್ ಆದೇಶ ಬಂದ ನಂತರವೂ ಸಾರ್ವಜನಿಕವಾಗಿ ಜಾರ್ಜ್ ರನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಕೋರ್ಟ್ ಆದೇಶಕ್ಕೆ ತಲೆ ಬಾಗಿದರೆ ನಿಮಗೂ ಕೂಡ ಕೀರ್ತಿ ಎಂದು ಸಿಎಂಗೆ ಮನವರಿಗೆ ಮಾಡಿಕೊಟ್ಟಿದ್ದಾರೆ.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕಾಲದಲ್ಲಿ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದ ರಮೇಶ್ ಕುಮಾರ್ ಅವರು ಮಾಜಿ ಸಚಿವ ಆರ್.ಡಿ ಕಿತ್ತೂರ್ ವಿರುದ್ಧ ಆರೋಪ ಕೇಳಿ ಬಂದ ಕೂಡಲೇ ಅವರಿಂದ ರಾಜಿನಾಮೆ ಪಡೆದಿದ್ದರು. ಇದೇ ರೀತಿ ಅನೇಕ ಪ್ರಕರಣಗಳು ನಡೆದಿವೆ. ಈಗ ನೀವು ಕೂಡ ರಾಜಿನಾಮೆ ಪಡೆಯುವುದು ಒಳ್ಳೆಯದ್ದು, ಇಲ್ಲದಿದ್ದರೆ ಇದರಿಂದ ಪಕ್ಷಕ್ಕೆ ದೊಡ್ಡ ಪೆಟ್ಟು ಬಿಳುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ದಿನ ಕಳೆದಂತೆ ಪ್ರಕರಣ ಜಟಿಲವಾಗುತ್ತಿದ್ದು ಸಾರ್ವಜನಿಕವಾಗಿ ಉತ್ತರ ನೀಡುವುದು ಕಷ್ಟವಾಗುತ್ತಿದೆ. ಈ ಮಧ್ಯೆ ವಿಪಕ್ಷಗಳು ಕೂಡ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದು ಅವರಿಗೆ ಆಹಾರವಾಗುವುದು ಬೇಡ. ವಿಪಕ್ಷಗಳು ಈಗಾಗಲೇ ಸಾಕಷ್ಟು ಡ್ಯಾಮೇಜ್ ಮಾಡಿವೆ. ತಕ್ಷಣ ಜಾರ್ಜ್ ರಾಜಿನಾಮೆಗೆ ಸೂಚಿಸಿ, ತನಿಖೆ ಮುಗಿವವರೆಗೂ ಜಾರ್ಜ್ ರಾಜಿನಾಮೆ ಪಡೆಯಿರಿ ಎಂದು ರಮೇಶ್ ಕುಮಾರ್ ಸಿಎಂ ಮನವೊಲಿಸಿದ್ದಾರೆ.
ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಮಡಿಕೇರಿ ಹೆಚ್ಚುವರಿ ಜೆಎಂಎಫ್ಸಿ ಕೋರ್ಟ್ ನ್ಯಾಯಾಧೀಶೆ ಅನ್ನಪೂರ್ಣೇಶ್ವರಿ ಅವರು ಕೆಜೆ ಜಾರ್ಜ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳ ಅಧಿಕಾರಿಗಳಾದ ಪ್ರೊಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಡಿಕೇರಿ ನಗರ ಠಾಣೆ ಪೊಲೀಸರಿಗೆ ಸೂಚಿಸಿದ್ದರು.