ರಾಜ್ಯ

ಹಾಸನ: ಆತ್ಮಹತ್ಯೆಗೆ ಯತ್ನಿಸಿದ ಉಪ ವಿಭಾಗಾಧಿಕಾರಿ ವಿರುದ್ಧ ಎಫ್ ಐ ಆರ್ ದಾಖಲು

Shilpa D

ಹಾಸನ: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಸನ ಉಪವಿಭಾಗಾಧಿಕಾರಿ (ಎಸಿ) ವಿಜಯಾ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ವಿಜಯಾ ಅವರು ಆತ್ಮಹತ್ಯೆಗೆ ಯತ್ನಿಸಿದ್ದಕ್ಕಾಗಿ ಐಪಿಸಿ 309ರನ್ವಯ ಅವರ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ಸ್ಥಳೀಯ ನ್ಯಾಯಾಲಯ ನಿರ್ದೇಶನ ನೀಡಿದ್ದು, ಶುಕ್ರವಾರ ಸಂಜೆ ಅವರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಒಂದು ವೇಳೆ, ಆರೋಪ ಸಾಬೀತಾದರೆ ಅವರಿಗೆ 1 ವರ್ಷಗಳ ಕಾರಾಗೃಹವಾಸ ವಿಧಿಸಬಹುದಾಗಿದೆ.

ವಿಜಯಾ ಅವರು ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿತ್ತು. ಆದರೆ, ಪ್ರಕಣದಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಪ್ರಕರಣ ದಾಖಲು ಮಾಡಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವಕೀಲ ಸುಜಿತ್‌ ನಾರಾಯಣ್‌ ಎಂಬುವರು ಹಾಸನದ ಕೆ.ಆರ್‌.ಪುರಂ ಬಡಾವಣೆ ಪೊಲೀಸರಿಗೆ ಗುರುವಾರ ಸಂಜೆ ದೂರು ನೀಡಲು ಮುಂದಾಗಿದ್ದರು.

ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರು. ಬಳಿಕ, ದೂರು ಸ್ವೀಕರಿಸದ ಪೊಲೀಸರ ಕ್ರಮ ಪ್ರಶ್ನಿಸಿ ಅವರು, ಹಾಸನದ 4ನೇ ಹೆಚ್ಚುವರಿ ಕಿರಿಯ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಕೆ.ಆರ್‌.ಪುರಂ ಪೊಲೀಸ್‌ ಠಾಣೆಯಲ್ಲಿ ವಿಜಯಾ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

SCROLL FOR NEXT