ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಷ್ಕರದಿಂದಾಗಿ ರಾಜ್ಯಾದ್ಯಂತ ಸೋಮವಾರ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಆಫೀಸಿಗೆ ತೆರಳುವವರು, ಹೊರ ಭಾಗಗಳಿಂದ ಬಂದವರು ಬಸ್ ತಂಗುದಾಣದಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.
ಸುಮಾರು 41 ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯ ಸಾರಿಗೆ ನಿಗಮ ಮತ್ತು ಒಕ್ಕೂಟದೊಂದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದರೂ ಕೂಡ ಎರಡೂ ಕಡೆಯವರು ತಮ್ಮ ಹಠವನ್ನೇ ಮುಂದುವರಿಸುತ್ತಿರುವುದರಿಂದ ಒಮ್ಮತಕ್ಕೆ ಬರುವಲ್ಲಿ ವಿಫಲವಾದರು.
ಮಾಧ್ಯಮದ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ''ನಾವು ಈಗಲೂ ಒಕ್ಕೂಟದ ಜೊತೆ ಮಾತುಕತೆಗೆ ಸಿದ್ದರಿದ್ದೇವೆ. ಅವರು ಮುಕ್ತ ಮನಸ್ಸಿನಿಂದ ಮಾತುಕತೆಗೆ ಬರಬೇಕು. ಅವರು ಹಣಕಾಸಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರ ಶೇಕಡಾ 35ರಷ್ಟು ವೇತನ ಹಚ್ಚಳ ಬೇಡಿಕೆಯನ್ನು ಮರುಪರಿಶೀಲಿಸಬೇಕು. ನಾವು ಮುಖ್ಯಮಂತ್ರಿಗಳ ಮಟ್ಟದಲ್ಲಿ ಮಾತುಕತೆಗೆ ಸಿದ್ದರಿದ್ದೇವೆ ಎಂದರು.
ಕೆಎಸ್ ಆರ್ ಟಿಸಿ ಸಿಬ್ಬಂದಿ ಮತ್ತು ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮತ್ತು ಅಖಿಲ ಭಾರತ ವ್ಯಾಪಾರ ಒಕ್ಕೂಟದ ಕಾಂಗ್ರೆಸ್ ನಾಯಕ ಹೆಚ್.ವಿ.ಅನಂತ ಸುಬ್ಬರಾವ್, ಒಕ್ಕೂಟ ಮುಖ್ಯಮಂತ್ರಿಗಳೊಂದಿಗೆ ಮಾತುಕತೆಗೆ ಸಿದ್ಧವಿದೆ. ಅವರು ಸಭೆ ಕರೆಯಲಿ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ನಮಗೂ ಬೇಸರವಿದೆ. ಆದರೆ ನಮ್ಮ ವಿಷಯಗಳನ್ನು ಸರ್ಕಾರ ಆಲಿಸಬೇಕು ಎಂದರು.
ಈ ಮಧ್ಯೆ ಹಾಸನ, ಬೆಂಗಳೂರು, ರಾಮನಗರ, ಬೆಳಗಾವಿ, ಶಿವಮೊಗ್ಗ, ಕೊಪ್ಪಳ ಮತ್ತು ಚಿಕ್ಕಮಗಳೂರುಗಳಲ್ಲಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ ಬಗ್ಗೆ ವರದಿಯಾಗಿದೆ.
ಮುಷ್ಕರದ ಸಂದರ್ಭದಲ್ಲಿ ಖಾಸಗಿ ವಾಹನ ನಿರ್ವಾಹಕರಿಗೆ ಬದಲಿ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದು, ಇದರ ಲಾಭ ಮಾಡಿಕೊಳ್ಳಲು ಹೊರಟಿರುವ ಖಾಸಗಿ ವಾಹನದವರು ದುಪ್ಪಟ್ಟು ಹಣವನ್ನು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದ್ದಾರೆ. ಹೀಗೆ ದುಪ್ಪಟ್ಟು ಹಣ ಸುಲಿಗೆ ಮಾಡುವವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.