ಬೆಂಗಳೂರು: ಜೂನ್ 4ರಂದು ರಾಜ್ಯಾದ್ಯಂತ ಪೊಲೀಸ್ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ.
ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಶಶಿಧರ್ ವಿರುದ್ಧ ಪ್ರಕರಣ ದಾಖಲಾಗಿದೆ. ನಿನ್ನೆ ರಾತ್ರಿ 12.30ಕ್ಕೆ ಯಲಹಂಕ ಉಪನಗರದಲ್ಲಿ ಶಶಿಧರ್ ಅವರನ್ನು ಬಂಧಿಸಲಾಗಿದೆ.
ಗುರುವಾರ ಬೆಳಗ್ಗೆ ನ್ಯಾಯಾಲಯಕ್ಕೆ ಶಶಿಧರ್ ಅವರನ್ನು ಹಾಜರು ಪಡಿಸಲಾಗಿದ್ದು, ಜೂನ್ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹಿರಿಯ ಅಧಿಕಾರಿಗಳ ಕಿರುಕುಳ ಖಂಡಿಸಿ ರಾಜ್ಯಾದ್ಯಂತ ಪೊಲೀಸ್ ಪೇದೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ವಾರಕ್ಕೊಂದು ರಜೆ, ಕೆಲಸಕ್ಕೆ ತಕ್ಕ ಸಂಬಳ ಮುಂತಾದ ಬೇಡಿಕೆಗಳಿಗೆ ಆಗ್ರಹಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಜೂನ್ 4ರಂದು ಪ್ರತಿಭಟನ ನಡೆಸಲು ತೀರ್ಮಾನಿಸಿದೆ. ಆದರೆ, ಇದಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಎಸ್ಮಾ ಜಾರಿ ಮಾಡಿದೆ.