ಬೆಂಗಳೂರು: ಕಾಶೀಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ನಂಬಿಸಿ ನೂರಾರು ಹಿರಿಯ ನಾಗರಿಕಿರಿಗೆ ಖಾಸಗಿ ಟ್ರಾವೆಲ್ಸ್ ಒಂದು ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಾಶಿ ಯಾತ್ರೆಗೆ ರಿಯಾಯಿತಿ ದರದಲ್ಲಿ ಕರೆದೊಯ್ಯುವುದಾಗಿ ಜಾಹೀರಾತು ನೀಡಿ ವಂಚಿಸಿದ ಆರೋಪದಲ್ಲಿ ಬೆಂಗಳೂರು ಮೂಲದ, ನಗರದ ಕೆ.ಜಿ.ಕೊಪ್ಪಲಿನ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿರುವ ಹೆರಿಟೇಜ್ ಇಂಡಿಯಾ ಟ್ರಾವೆಲ್ಸ್ ಸಂಸ್ಥೆಯ ಮಾಲೀಕ ಗಣೇಶ ಶರ್ಮಾ ವಿರುದ್ಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇವಲ 11,400 ರೂ.ಗೆ ಒಂದು ವಾರಗಳ ಕಾಶಿ ಯಾತ್ರೆ ಇದೆ ಎಂದು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದ ಹೆರಿಟೇಜ್ ಇಂಡಿಯಾ ಟ್ರಾವೆಲ್ಸ್ ಸಂಸ್ಥೆ, ಹಿರಿಯ ನಾಗರಿಕರಿಗೆ ಒಂದು ಸಾವಿರ ರೂ. ರಿಯಾಯಿತಿ ಘೋಷಿಸಿತ್ತು. ಈ ಜಾಹೀರಾತಿನಿಂದ ಮೈಸೂರು ನಗರ 90 ಮಂದಿ ಹಿರಿಯ ನಾಗರಿಕರು, 10,400 ರೂ. ಹಣ ನೀಡಿ, ಕಾಶಿ ಯಾತ್ರೆಗೆ ಬುಕ್ ಮಾಡಿದ್ದು ಜೂ.11ಕ್ಕೆ ಪ್ರವಾಸ ನಿಗದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 6.30ರ ಸಮಯದಲ್ಲಿ ಕಾಶಿ ಯಾತ್ರೆಗೆ ತೆರಳಲು ಟ್ರಾವೆಲ್ಸ್ ಸಂಸ್ಥೆಯ ಕಚೇರಿಗೆ ಆಗಮಿಸಿದ ಪ್ರವಾಸಿಗರಿಗೆ ನಿರಾಸೆ ಕಾದಿತ್ತು. ಕಚೇರಿಯ ಬಾಗಿಲು ತೆರೆದಿರಲಿಲ್ಲ. ಈ ಬಗ್ಗೆ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಿದ್ದರೂ ಸಾಧ್ಯವಾಗಲಿಲ್ಲ. ಸುಮಾರು 10 ಗಂಟೆಯವರೆಗೂ ಕಾದ ಪ್ರವಾಸಿಗರು ನಿರಾಶರಾದರು. ಕೊನೆಗೆ ಪ್ರವಾಸಕ್ಕೆಂದು ಕರೆದೊಯ್ಯುವುದಾಗಿ ವಂಚಿಸಿದ ಸಂಸ್ಥೆಯ ಮಾಲೀಕ ಗಣೇಶನ ಶರ್ಮಾ ವಿರುದ್ಧ ದೂರು ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಾಶಿ ಯಾತ್ರೆಗೆ ಸಿದ್ಧರಾಗಿ ಬಂದಿದ್ದ ಪುಟ್ಟಸ್ವಾಮಿ ಸೇರಿದಂತೆ ಹಲವು ಮಂದಿ, ಮತ್ತೆ ಮನೆಗೆ ಹಿಂದಿರುಗದೇ ಬೇರೆಡೆ ಪ್ರವಾಸಕ್ಕೆ ವ್ಯವಸ್ಥೆ ಮಾಡಿಕೊಂಡು ತೆರಳಿದರೆ ಹಲವು ಮಂದಿ ಮನೆಗೆ ಹಿಂದಿರುಗಿದರು.
ಮೈಸೂರು ಸೇರಿದಂತೆ ಬೆಂಗಳೂರಿನಲ್ಲಿಯೂ ಕಾಶಿ ಯಾತ್ರೆಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ರೈಲಿನಲ್ಲಿ ಬುಕ್ಕಿಂಗ್ ವೇಳೆ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ತೊಂದರೆಯಾಗಿದೆ. ಸೋಮವಾರ ಎಲ್ಲಾ ಪ್ರವಾಸಿಗರಿಗೆ ಹಣವನ್ನು ಹಿಂದಿರುಗಿಸಲಾಗುವುದು. ಇಲ್ಲದಿದ್ದರೆ ಮುಂದಿನ ತಿಂಗಳು ನಮ್ಮ ಸಂಸ್ಥೆಯಿಂದಲೇ ಇದೇ ಪ್ರವಾಸವನ್ನು ಏರ್ಪಡಿಸಲಾಗಿದ್ದು, ಅದರಲ್ಲಿ ಕರೆದುಕೊಂಡು ಹೋಗಲಾಗುವುದು,' ಎಂದು ಟ್ರಾವೆಲ್ಸ್ ಸಂಸ್ಥೆಯ ಗಣೇಶ್ ಶರ್ಮಾ ಹೇಳಿದ್ದಾರೆ.