ರಾಜ್ಯ

ಬೆಂಗಳೂರು: ಸಿಗರೇಟ್ ಲಾರಿ ಹೈಜಾಕ್ ಮಾಡಿದ್ದ ಆರೋಪಿ ಹೈದರಾಬಾದ್ ನಲ್ಲಿ ಅರೆಸ್ಟ್

Shilpa D

ಬೆಂಗಳೂರು: ಸಿಗರೇಟು ಬಂಡಲ್‌ಗಳನ್ನು ತುಂಬಿಕೊಂಡು ಕೇರಳಕ್ಕೆ ಹೋಗುತ್ತಿದ್ದ ಲಾರಿಯನ್ನು ಕದ್ದೊಯ್ದಿದ್ದ ದುಷ್ಕರ್ಮಿಗಳ ಪೈಕಿ ಒಬ್ಬನನ್ನು ಚಂದ್ರಾ ಲೇಔಟ್ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ.

ಜಗಜೀವನ್‌ರಾಮ ನಗರದ ತನ್ವೀರ್ ಬಂಧಿತ ಆರೋಪಿ.  ಕೃತ್ಯದ ಸೂತ್ರಧಾರ ಮಹಮದ್ ಮುಸ್ತಾಕ್‌ ಹಾಗೂ ಇತರ ಐವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ತನ್ವೀರ್‌ನಿಂದ ಸುಮಾರು ರು.2 ಕೋಟಿ ಮೌಲ್ಯದ ಆರು ಟನ್ ಸಿಗರೇಟು ಜಪ್ತಿ ಮಾಡಿದ್ದಾರೆ.

ಪ್ರಕರಣ ಸಂಬಂಧ ಲಾರಿ ಚಾಲಕ ರಾಧಾಕೃಷ್ಣ ಎಂಬುವರು ಮೇ 31ರಂದು ಚಂದ್ರಾಲೇಔಟ್ ಠಾಣೆಗೆ ದೂರು ಕೊಟ್ಟಿದ್ದರು. ಕೇರಳದ ಕೊಚಾರ್ ರಸ್ತೆಯಲ್ಲಿರುವ ಸಿಗರೇಟು ಕಾರ್ಖಾನೆಯೊಂದರಲ್ಲಿ ಲಾರಿ ಚಾಲಕರಾಗಿರುವ ರಾಧಾಕೃಷ್ಣ, ಮೇ 25ರಂದು ನಗರಕ್ಕೆ ಬಂದಿದ್ದರು. ಆ ದಿನ ರಾತ್ರಿಯೇ ಚಿಕ್ಕಜಾಲದ ಐಟಿಸಿ ಕಾರ್ಖಾನೆಯಲ್ಲಿ 13 ಟನ್‌ ಸಿಗರೇಟು ಬಂಡಲ್‌ಗಳನ್ನು ಲೋಡ್ ಮಾಡಿಸಿಕೊಂಡ ಅವರು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕೇರಳಕ್ಕೆ ಹೊರಟಿದ್ದರು.

ಕೇರಳದಲ್ಲಿದ್ದ ಮುಸ್ತಾಕ್‌ನ ಸ್ನೇಹಿತನೊಬ್ಬ ಈ ಬಗ್ಗೆ ಆತನಿಗೆ ಪೂರ್ಣ ಮಾಹಿತಿ ಕೊಟ್ಟಿದ್ದ. ಕೂಡಲೇ ಸಹಚರರ ಜತೆ ತನ್ನ ಕಾರಿನಲ್ಲಿ ಆ ಲಾರಿಯನ್ನು ಹಿಂಬಾಲಿಸಿದ್ದ ಮುಸ್ತಾಕ್, ನಾಯಂಡಹಳ್ಳಿ ಬಳಿ ಅಡ್ಡಗಟ್ಟಿದ್ದ. ನಂತರ ಚಾಕುವಿನಿಂದ ಬೆದರಿಸಿ ಚಾಲಕ ರಾಧಾಕೃಷ್ಣ ಅವರನ್ನು ಕೆಳಗಿಳಿಸಿದ್ದ ಆರೋಪಿಗಳು, ಅವರ ಕಣ್ಣಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಮತ್ತಿಬ್ಬರು ಲಾರಿ ತೆಗೆದುಕೊಂಡು ಹೊಸಕೋಟೆ ರಸ್ತೆಯಲ್ಲಿ ತೆರಳಿದ್ದರು.

ಹೊಸಕೋಟೆಯ ನೀಲಗಿರಿ ತೋಪಿನತ್ತ ಲಾರಿ ಒಯ್ದ ಆರೋಪಿಗಳು, ಅಲ್ಲಿ ಇನ್ನೊಂದು ಲಾರಿ ತರಿಸಿಕೊಂಡು ಮಾಲನ್ನು ಅದಕ್ಕೆ ತುಂಬಿಕೊಂಡರು. ನಂತರ ಕದ್ದ ಲಾರಿಯನ್ನು ಅಲ್ಲೇ ಬಿಟ್ಟು, ಅದರಲ್ಲಿದ್ದ ಜಿಪಿಎಸ್ ವ್ಯವಸ್ಥೆಯನ್ನು ಕಿತ್ತು ಹಾಕಿ ಪರಾರಿಯಾಗಿದ್ದರು. ರಾಜಾಜಿನಗರ ಪೊಲೀಸರು ಬೇರೊಂದು ಪ್ರಕರಣದ ತನಿಖೆ ನಡೆಸುವಾಗ ಜೂನ್ 5ರಂದು ಈ ಲಾರಿ ಪತ್ತೆಯಾಗಿತ್ತು.  

ಚಿಕ್ಕಜಾಲದ ಐಟಿಸಿ ಕಾರ್ಖಾನೆಯಿಂದ– ನಾಯಂಡಹಳ್ಳಿವರೆಗೆ  ಲಾರಿ ಸಾಗಿದ ಮಾರ್ಗದಲ್ಲಿದ್ದ ಅಷ್ಟೂ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಆಗ ಲಾರಿಯನ್ನು ಹಿಂಬಾಲಿಸಿದ ಕಾರು ಮುಸ್ತಾಕ್‌ನದು ಎಂದು ಗೊತ್ತಾಯಿತು. ಬೆಳಿಗ್ಗೆಯೇ ಆತನ ಮನೆಗೆ ಹೋದಾಗ ಮುಸ್ತಾಕ್ ಇರಲಿಲ್ಲ. ಹೀಗಾಗಿ ಅವನದ್ದೇ ಕೈವಾಡ ಎಂಬುದು ಖಚಿತವಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT