ಬೆಂಗಳೂರು: ಪೊಲೀಸರು ಹಲ್ಲೆ ನಡೆಸಿ, ನಿಂದಿಸಿದರೆಂಬ ಕಾರಣಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೇತಾ (23) ಆತ್ಮಹತ್ಯೆಗೆ ಯತ್ನಿಸಿರುವ ಯುವತಿಯಾಗಿದ್ದು, ಈಕೆ ಬೆಂಗಳೂರಿನ ಉತ್ತರ ತಾಲೂಕಿನ ಕೆ.ಜಿ.ಲಕ್ಕೇನಹಳ್ಳಿಯ ನಿವಾಸಿಯಾಗಿದ್ದಾರೆ. ಜೂ.8 ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ಶ್ವೇತಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಪ್ರಸ್ತುತ ಶ್ವೇತಾ ಕೋಮಾ ಸ್ಥಿತಿಗೆ ತಲುಪಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ನೆರೆಮನೆಯವರು ತಮ್ಮ ನಿವೇಶನಕ್ಕೆ ನೀರಿನ ಸಂಪರ್ಕ ಪಡೆಯಲು ಪೈಪ್ ಲೈನ್ ಮಾಡಿಸಲು ಬಂದಿದ್ದಾರೆ. ಈ ವೇಳೆ ಶ್ವೇತ ಮನೆಯವರು ಹಾಗೂ ನೆರೆಮನೆಯವರೊಂದಿಗೆ ಜಗಳವಾಗಿದೆ. ಇದರಂತೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿರುವ ನೆರೆಮನೆಯವರು ಪೊಲೀಸರನ್ನು ಕರೆತಂದು ನೀರಿನ ಸಂಪರ್ಕ ಮಾಡಿಸಿಕೊಳ್ಳಲು ಯತ್ನಿಸಿದ್ದಾರೆ.
ಶ್ವೇತಾ ಮನೆಯಲ್ಲಿ ಆಕೆಯ ತಾಯಿ ಮತ್ತು ತಂಗಿ ಮಾತ್ರ ಇದ್ದುದ್ದರಿಂದ ಇವರೇ ನೆರೆಮನೆಯವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇದರಂತೆ ಪೊಲೀಸರು ಮನೆಯ ಬಳಿ ಬಂದಾಗ ಶ್ವೇತಾ ಪೊಲೀಸರೊಂದಿಗೆ ಮಾತನಾಡಿದ್ದಾಳೆ. ಈ ವೇಳೆ ಪೊಲೀಸರು ಆಕೆಗೆ ಬಾಯಿಗೆ ಬಂದಂತೆ ನಿಂದಿಸಿದ್ದಾರೆ. ಇದರಿಂದ ನೊಂದು ಶ್ವೇತಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಸಂಬಂಧಿಕರು ಆರೋಪಿಸಿದ್ದಾರೆ.