ಉಡುಪಿ: ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯನ ಬರ್ಬರ ಹತ್ಯೆ ನಡೆದ ಮಾರನೇ ದಿನವೇ ಉಡುಪಿ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯನ ಹತ್ಯೆಗೆ ಯತ್ನಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ ಸುಮಾರು 10.30ರ ಸುಮಾರಿಗೆ ಬೈಲೂರಿನ ಬಳಿ ಸಾಂಟ್ರೋ ಕಾರು ಹಾಗೂ ಒಮ್ನಿಯಲ್ಲಿ ಬಂದ ದುಷ್ಕರ್ಮಿಗಳು ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಸುಮಿತ್ ಶೆಟ್ಟಿ ಹಾಗು ಅವರ ಸಹಚರರ ಮೇಲೆ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸುಮಿತ್ ಶೆಟ್ಟಿ ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವರಬಾಡಿ ಪ್ರವೀಣ್ ಬಣದ ಸದಸ್ಯರು ಹಾಗೂ ಸುಮಿತ್ ಶೆಟ್ಟಿಗೂ ಹಣದ ವಿಚಾರದಲ್ಲಿ ಈ ಹಿಂದೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ಕುರಿತು ವರಬಾಡಿ ಪ್ರವೀಣ್ ಹಾಗೂ ಅವರ ಸಂಗಡಿಗರು ಸುಮಿತ್ ರ ಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಸುಮಿತ್ ಶೆಟ್ಟಿ, ವರಬಾಡಿ ಪ್ರವೀಣ್ ತಂಡದ ಸದಸ್ಯರಿಂದ ನಿನ್ನೆ ಸಂಜೆ ಹಣ ನೀಡುವಂತೆ ಬೆದರಿಕೆ ಕರೆ ಬಂದಿದ್ದು, ಒಂದು ವೇಳೆ ಹಣ ನೀಡದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಹೇಳಿದ್ದಾರೆ. ಅದರಂತೆಯೇ ಇಂದು ಬೆಳಗ್ಗೆ ನನ್ನ ಮೇಲೆ ದಾಳಿ ನಡೆಸಿದ್ದಾರೆ' ಎಂದರು.
ಈ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.