ಬೆಂಗಳೂರು: ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಸಾಕಷ್ಟು ಪರಿಶ್ರಮ ಪಡುತ್ತಿದ್ದರೆ, ಇತ್ತ ನಗರದಲ್ಲಿ ನಡೆಯುತ್ತಿರುವ ಘಟನೆಗಳು ಪ್ರವಾಸಿಗರು ಆಂತಕ ಪಡುವಂತೆ ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿನ ಪ್ರವಾಸಿತಾಣಗಳಲ್ಲಿ ರಕ್ಷಣಾ ಕೊರತೆ ಎದ್ದುಕಾಣುತ್ತಿದ್ದು, ಖಾಸಗಿತನಕ್ಕಾಗಿ ಹೋಗುವ ಪ್ರೇಮಿಗಳು ಇಂದು ಭೀತಿ ಪರಿಸ್ಥಿತಿ ಎದುರಿಸುವಂತಾಗಿದೆ. ಇದಕ್ಕಾಗಿ ಉದಾಹರಣೆಯಾಗಿ ತುಮಕೂರಿನ ದೇವನದುರ್ಗದಲ್ಲಿ ನಡೆದ ಘಟನೆಯನ್ನು ತೆಗೆದುಕೊಳ್ಳಬಹುದು.
ತನ್ನ ಗೆಳೆತಿಯೊಂದಿಗೆ ಖಾಸಗಿತನಕ್ಕಾಗಿ ದೇವನದುರ್ಗಕ್ಕೆ ಹೋದ ಮಂಜುನಾಥ್ ಎಂಬುವವರಿಗೆ ಧಳಿಸಿ ಆತನ ಮೇಲೆ ಹಲ್ಲೆ ನಡೆಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಈ ಪ್ರಕರಣ ಇದೀಗ ದೇವನದುರ್ಗಕ್ಕೆ ಹೋಗುವ ಪ್ರವಾಸಿಗರನ್ನು ಆಂತಕ್ಕೆ ಸಿಲುಕಿಸಿದೆ.
ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸರು ದೇವನದುರ್ಗದಲ್ಲಿ ಪ್ರೇಮಿಗಳನ್ನು ಗುರಿಯಾಗಿರಿಸಿಕೊಂಡು ಗುಂಪೊಂದು ದಾಳಿ ಮಾಡುತ್ತಿದೆ. ದೇವನದುರ್ಗದಂತೆಯೇ ನಗರದಲ್ಲೂ ಇಂತಹದ್ದೇ ಘಟನೆಗಳು ನಡೆಯುತ್ತಿದೆ. ನಗರದಲ್ಲೂ ಇಂತಹದ್ದೇ ಸಾಕಷ್ಟು ಘಟನೆಗಳು ನಡೆದಿದೆ ಎಂದು ಹೇಳಿದ್ದಾರೆ.
ನೈಸ್ ರಸ್ತೆ, ನಂದಿ ಬೆಟ್ಟ, ದೊಡ್ಡ ಆಲದಮರ, ರಾಷ್ಟ್ರೀಯ ಹೆದ್ದಾರಿ -7 ಪ್ರೇಮಿಗಳಿಗೆ ತಾಣವಾಗಿದ್ದು, ಇಂತಹ ಪ್ರದೇಶಗಳಲ್ಲಿಯೇ ಪ್ರೇಮಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ.
ಸಾಕಷ್ಟು ಪ್ರೇಮಿಗಳು ಇಂತಹ ಸ್ಥಳಗಳಿಗೆ ಬೆಳ್ಳಂಬೆಳಿಗ್ಗೆ, ಸಂಜೆ, ಹಾಗೂ ತಡರಾತ್ರಿಯಲ್ಲಿ ಬರುತ್ತಿರುತ್ತಾರೆ. ಆದರೆ, ಇಂತಹ ಸಮಯವನ್ನೇ ನೋಡಿಕೊಂಡಿರುವ ದಾಳಿಕೋರರು ಅವರ ಮೇಲೆ ದಾಳಿ ಮಾಡುತ್ತಾರೆ, ಎಲ್ಲಿ ತಮ್ಮ ಸಂಬಂಧದ ಕುರಿತು ಇತರರಿಗೆ ತಿಳಿಯುತ್ತದೆಯೇ ಎಂಬ ಕಾರಣಕ್ಕೆ ಎಷ್ಟೋ ಪ್ರಕರಣಗಳು ದಾಖಲಾಗುವುದೇ ಇಲ್ಲ. ತಡರಾತ್ರಿಯಲ್ಲಿ ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡದಂತೆ ಜನತೆಯಲ್ಲಿ ನಾವು ಮನವಿ ಮಾಡಿಕೊಳ್ಳುತ್ತೇವೆಂದು ಅಧಿಕಾರಿಗಳು ಹೇಳಿದ್ದಾರೆ.
ಸಾಕಷ್ಟು ಪ್ರೇಮಿಗಳು ರಸ್ತೆ ಮಧ್ಯೆಯೇ ವಾಹನಗಳನ್ನು ನಿಲ್ಲಿಸಿಬಿಟ್ಟಿರುತ್ತಾರೆ. ಇನ್ನು ಕೆಲವು ಕಾರುಗಳಲ್ಲಿಯೇ ಇರುತ್ತಾರೆ. ಇದು ದಾಳಿಕೋರರಿಗೆ ಸಹಾಯ ಮಾಡಿದಂತಾಗುತ್ತದೆ. ದಾಳಿಯಾದರೂ ಪ್ರಕರಣಗಳನ್ನು ದಾಖಲು ಮಾಡುವುದಿಲ್ಲ. ಇನ್ನು ಕೆಲವು ಪ್ರಕರಣಗಳಲ್ಲಿ ದಾಳಿಕೋರರು ವಿಡಿಯೋ ಮಾಡಿ ಪ್ರೇಮಿಗಳನ್ನು ಬ್ಲಾಕ್ ಮೇಲ್ ಮಾಡುತ್ತಾರೆಂದು ಪೊಲೀಸರು ಹೇಳಿದ್ದಾರೆ.