ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲದಂತಾಗಿದ್ದು, ಮತ್ತೆ ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬಸವನಗುಡಿ ಸಮೀಪದ ಎಂ.ಡಿ. ಬ್ಲಾಕ್ ನಲ್ಲಿ ಮನೆಯೊಂದಕ್ಕೆ ನುಗ್ಗಿರುವ ದುಷ್ಕರ್ಮಿಗಳು ಮಹಿಳೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಸಯ್ದಾ ಫಾತಿಮಾ (52) ಕೊಲೆಯಾದ ಮಹಿಳೆ. ಅಫ್ಜಲ್ ಪಾಷಾ ಎಂಬುವವರ ಪತ್ನಿಯಾಗಿದ್ದಾರೆ.
ರಾತ್ರಿ 7 ಗಂಟೆಗೆ ಸುಮಾರಿಗೆ ಮನೆಗೆ ನುಗ್ಗಿರುವ ಪಾತಕಿಗಳು ಮೊದಲು ಫಾತಿಮಾ ಅವರ ತಲೆಗೆ ಹೊಡೆದಿದು, ಮುಖ ಹಾಗೂ ಕತ್ತಿಗೆ 2-3 ಬಾರಿ ಚೂರಿ ಹಾಕಿದ್ದಾರೆ. ನಂತರ ಫಾತಿಮಾ ಅವರ ದೇಹವನ್ನು ಬೆಡ್ ರೂಮ್ ಎಳೆದೊಯ್ದಿರುವ ದುಷ್ಕರ್ಮಿಗಲು ಆಕೆಯನ್ನು ಬೆಡ್ ಶೀಟ್ ನಲ್ಲಿ ಸುತ್ತಿ ಮಲಗಿಸಿ ಬಾಗಿಲು ಹಾಕಿದ ಸ್ಥಿತಿಯಲ್ಲಿರಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
8 ಗಂಟೆ ಸುಮಾರಿಗೆ ಫಾತಿಮಾ ಅವರ ಪತಿ ಪಾಷಾ ಅವರು ಮನೆಗೆ ಬಂದಾಗ ಬೆಡ್ ರೂಮಿನಲ್ಲಿ ಫಾತಿಮಾಳ ಮೃತದೇಹ ಕಂಡುಬಂದಿದೆ. ಕೂಡಲೇ ಕಿರುಚಾಡಿದಾಗ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ನಂತರ ಸ್ಥಳೀಯರು ಬಸವನಗುಡು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ.
ಪಾಷಾ ಅವರು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. 3 ವರ್ಷದ ಹಿಂದೆ ಮಾವಳ್ಳಿಯಿಂದ ಬಸವನಗುಡಿಗೆ ಮನೆಯನ್ನು ಬದಲಾಯಿಸಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಮಗಳಿಗೆ ವಿವಾಹವಾಗಿದ್ದು ಪತಿ ಮನೆಯಲ್ಲಿದ್ದಾರೆ. ಇನ್ನು ಪುತ್ರ ಕೋಲಾರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಫಾತಿಮಾ ಅವರ ಪತಿ ಎಂದಿನಂತೆ ಬೆಳಿಗ್ಗೆ ಬೇಗನೆ ಕೆಲಸಕ್ಕೆ ಹೋಗುತ್ತಿದ್ದರು. ಸಂಜೆ 7.30ರ ಸುಮಾರಿಗೆ ಮನೆಗೆ ಬರುತ್ತಿದ್ದರೆಂದು ತಿಳಿದುಬಂದಿದೆ. ಮಧ್ಯಾಹ್ನದ ವೇಳೆಯಲ್ಲಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡು ಪೊಲೀಸರು ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಈ ವರೆಗೂ ಕಾರಣಗಳು ತಿಳಿದುಬಂದಿಲ್ಲ. ಆದರೆ, ಫಾತಿಮಾ ಅವರ ಮೇಲೆ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬರಬೇಕಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಕೊಲೆಯನ್ನು ಒಬ್ಬ ವ್ಯಕ್ತಿ ಮಾಡಿದ್ದಾನೆಂದು ಶಂಕೆಗಳು ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.