ಬೆಂಗಳೂರು: ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ವರಿಷ್ಠರು ನೇಮಕ ಮಾಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಸೋಮವಾರ ಈ ಆದೇಶ ಹೊರಡಿಸಿದ್ದಾರೆ. ಇನ್ನು ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ದಿನೇಶ್ ಗುಂಡೂರಾವ್ ಅವರ ಅಭಿಮಾನಿಗಳು ನಿನ್ನೆ ಪ್ರತಿಭಟನೆ ನಡೆಸಿದ್ದರು.
ರಾಜ್ಯ ಸರ್ಕಾರ ಈ ನಡೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗುಂಡೂರಾವ್ ಅವರು, ಪಕ್ಷದ ಹೈ ಕಮಾಂಡ್ ನನ್ನಲ್ಲಿರುವ ಉತ್ತಮ ಸಂಘಟನಾ ನೈಪುಣ್ಯತೆಯನ್ನು ಗುರ್ತಿಸಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಸಚಿವನಾಗಿ ನಾನು ಕಾರ್ಯನಿರ್ವಹಿಸಿದ್ದೇನೆ.
ಈ ವರೆಗೂ ಸ್ವಾರ್ಥತೆಯ ರಾಜಕೀಯದಲ್ಲಿ ನಾನು ಎಂದಿಗೂ ಭಾಗಿಯಾಗಿಲ್ಲ. ಪಕ್ಷ ಇದೀಗ ನನಗೆ ಒಂದು ಹೊಸ ಜವಾಬ್ದಾರಿಯನ್ನು ನೀಡಿದೆ. ಆ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಲು ಇಚ್ಛಿಸುತ್ತೇನೆ. 2018ರ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಕಾರ್ಯನಿರ್ವಹಿಸಬೇಕಿದೆ. ನನ್ನಿಂದ ಸಾಧ್ಯವಾದಷ್ಟು ಉತ್ತಮವಾದ ಕೆಲಸವನ್ನು ಮಾಡುತ್ತೇನೆಂದು ಹೇಳಿದ್ದಾರೆ.