ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಮಾವು ಎಕ್ಸ್ ಪೋರ್ಟ್ ಮೇಳದಲ್ಲಿ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತನಾಡಿದ್ದು, ಅವರ ಲಘುವಾದ ಹೇಳಿಕೆಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಗರಂ ಆಗಿದ್ದಾರೆ.
ವೇದಿಕೆಯಲ್ಲಿ ಆಸೀನರಾಗಿದ್ದ ರವಿಚಂದ್ರನ್ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ "ಇಲ್ಲಿಗೆ ಯಾಕೆ ಬಂದೆ ಅನ್ನೋದು ಗೊತ್ತಿಲ್ಲ. ಮಾವು ಎಕ್ಸ್ ಪೋರ್ಟ್ ಮೇಳ ಕಾರ್ಯಕ್ರಮದ ಬಗ್ಗೆ ನನಗೆ ಗೊತ್ತಿರಲಿಲ್ಲ. ಆದರೆ ಸ್ನೇಹಿತ ಜಿಎ ಬಾವ ಅವರು ಕರೆ ಮಾಡಿ ಆಹ್ವಾನಿಸಿದ್ದಕ್ಕಾಗಿ ಬಂದೆ, ಆನಂತರವಷ್ಟೇ ಇಲ್ಲಿ ಮಾವು ಮೇಳ ನಡೆಯುತ್ತಿದೆ ಎಂಬುದು ಗೊತ್ತಾಯಿತು, ಎಲ್ಲವೂ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಬಗ್ಗೆ ನನಗೆ ಗೊತ್ತಿಲ್ಲದೆ ಬಂದೆ ಎಂದು ಲಘುವಾಗಿ ಹೇಳಿದ್ದಕ್ಕೆ ಸಚಿವ ರಮೇಶ್ ಕುಮಾರ್ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಕೆಲಕ್ಷಣ ಅವಕ್ಕಾದರು. ರವಿಚಂದ್ರನ್ ಅವರ ಲಘುವಾದ ಹೇಳಿಕೆಗೆ ಸ್ವಲ್ಪ ಅಸಮಾಧಾನಗೊಂಡಂತೆ ಕಂಡ ರಮೇಶ್ ಕುಮಾರ್ " ರವಿಚಂದ್ರನ್ ನೀವು ಬಣ್ಣದ ಲೋಕದ ನಟರು, ಆದರೆ ಬಣ್ಣದ ಲೋಕವೇ ಬೇರೆ. ರೈತರ ಕಷ್ಟವೇ ಬೇರೆ. ನಿಮಗೆ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲಾ ಅಂತ ಹೇಳಿದ್ದಿರಾ ಆದರೆ ರೈತರ ಪರಿಸ್ಥಿತಿ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ರಮೇಶ್ ಕುಮಾರ್, " ನಾನೇನು ಸಿನಿಮಾ ಜಾಸ್ತಿ ನೋಡುವುದಿಲ್ಲ, ಆದರೆ ಇಲ್ಲಿ ನಿಮ್ಮ ಹೇಳಿಕೆಯನ್ನು ನೋಡುತ್ತೇನೆ, ಕಾಲಿಗೆ ಹಾಕಿಕೊಳ್ಳುವ ಚಪ್ಪಲಿ ಮೇಲೂ ಬೆಲೆ ಇರುತ್ತದೆ. ಆದರೆ ರೈತರಿಗೆ ಬೆಲೆ ಇಲ್ಲ ಎಂದು ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.