ರಾಜ್ಯ

ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಾಮಸ್ತಕಾಭಿಷೇಕ 2018 ಅಚರಣೆಗೆ ಸರ್ಕಾರ ನಿರ್ಧಾರ

Manjula VN

ಬೆಂಗಳೂರು: ಶ್ರವಣಬೆಳಗೊಳದಲ್ಲಿ 2018ರಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಮಹೋತ್ವಸಕ್ಕೆ ರು.575 ಕೋಟಿ ಅಂದಾಜು ಯೋಜನೆ ತಯಾರಿ ನಡೆಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

ಮಹಾಮಸ್ತಕಾಭಿಷೇಕ 2018 ಮಹೋತ್ಸವ ಕುರಿತಂತೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಚಿಂತನೆ ನಡೆಸಲಾಗಿದ್ದು, ಇದಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲು ರು. 575 ಕೋಟಿ ಹಣವನ್ನು ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯವರೊಂದಿಗಿನ ಸಭೆ ಬಳಿಕ ಮಾಹಿತಿ ನೀಡಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರು, ಮಹೋತ್ಸವಕ್ಕೆ 40 ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಹೀಗಾಗಿ ರು. 400 ಕೋಟಿ ಹಣವನ್ನು ಮೂಲಭೂತ ಸೌಕರ್ಯಗಳಿಗೆ ಖರ್ಚು ಮಾಡಲಾಗುತ್ತದೆ. ರು. 22 ಕೋಟಿ ಹಣವನ್ನು ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರಚಾರಕ್ಕಾಗಿ ವಿನಿಯೋಗ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ, ಪ್ರವಾಸಿಗರಿಗೆ ಸೌಕರ್ಯಗಳು ಒದಗಿಸುವ ಸಲುವಾಗಿ ಇತರೆ ರಾಜ್ಯಗಳಿಗೂ ಪತ್ರ ಬರೆಯಲು ತೀರ್ಮಾನಿಸಿದ್ದು, ಇತರೆ ರಾಜ್ಯಗಳಿಗೆ ಭೂಮಿ ಪಡೆಯಲು ಅವಕಾಶ ಒದಗಿಸಲಾಗುತ್ತದೆ ಎಂದಿದ್ದಾರೆ.

ಸುಮಾರು 1035 ವರ್ಷಗಳ ಹಿಂದೆ ಸ್ಥಾಪನೆಯಾದ ಗೊಮ್ಮಟೇಶ್ವರ ಮೂರ್ತಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಸಲಾಗುತ್ತಿದ್ದು, 2018ಕ್ಕೆ 89ನೇ ಮಹಾಮಸ್ತಕಾಭಿಷೇಕವನ್ನು ಜರುಗಿಸಲಾಗುತ್ತಿದೆ.

SCROLL FOR NEXT