ರಾಮನಗರ: ನಿಲ್ದಾಣದಲ್ಲಿ ನಿಂತು ಬಸ್ ಗಾಗಿ ಕಾಯುತ್ತಿದ್ದ ಮಹಿಳೆಯರ ಮೇಲೆ ಆಪೆ ಆಟೋವೊಂದು ನುಗ್ಗಿದ ಪರಿಣಾಮ ಸ್ಥಳದಲ್ಲೇ ಇಬ್ಬರೂ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಜಕ್ಕೆ ಗೌಡನದೌಡ್ಡಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ದೇವಮ್ಮ (50) ಹಾಗೂ ಲಕ್ಷ್ಮಮ್ಮ (48) ಮೃತರು ಎಂದು ಗುರ್ತಿಸಲಾಗಿದೆ. ಇಬ್ಬರೂ ಮಹಿಳೆಯರು ಜಕ್ಕೆಗೌಡನದೌಡ್ಡಿ ಗ್ರಾಮದ ನಿಲ್ದಾಣದಲ್ಲಿ ನಿಂತು ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡಿದ್ದ ಆಪೆ ಆಟೋ ಇಬ್ಬರ ಮೇಲೆ ಹರಿದಿದೆ.
ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಮತ್ತೊಬ್ಬ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ. ಪ್ರಕರಣವೀಗ ಸಾತನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.